Log In | Join Now
Home arrow Vedike arrow Odugara Vedike arrow Nyayangadalli Kannada Balakege Samiti : Dinakaran
Nyayangadalli Kannada Balakege Samiti : Dinakaran Print
Written by jayashree   

ಬೆಂಗಳೂರು: ನ್ಯಾಯಾಂಗದಲ್ಲಿ ಕನ್ನಡ ಬಳಕೆ ಸಂಬಂಧ ಉನ್ನತ ಮಟ್ಟದ ಪರಿಶೀಲನಾ ಸಮಿತಿಯೊಂದನ್ನು ರಚಿಸುವುದಾಗಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಭರವಸೆ ನೀಡಿದ್ದಾರೆ.


ಭಾನುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಕನ್ನಡ ಭಾಷೆಯಲ್ಲಿ ತೀರ್ಪು ನೀಡಿದ ಧನ್ಯತೆಗೆ ಪಾತ್ರವಾಗಿರುವ ರಾಜ್ಯದ ವಿವಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಗಳ ಐವತ್ತು ನ್ಯಾಯಾಧೀಶರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.


ಕರ್ನಾಟಕ ನ್ಯಾಯಾಂಗದಲ್ಲಿ ಮಾತೃ ಭಾಷೆಯಾದ ಕನ್ನಡ ಭಾಷೆಯ ಸಮರ್ಪಕ ಅನುಷ್ಠಾನ ಆಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ನ್ಯಾಯಾಧೀಶರು ಕನ್ನಡದಲ್ಲಿ ತೀರ್ಪು ನೀಡಲು ಅನುಮತಿ ಪಡೆಯಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಜಪಾನ್ ಮತ್ತು ಚೀನಾದಂಥ ಅತಿವೇಗದಲ್ಲಿ ಬೆಳೆಯುತ್ತಿರುವ ದೇಶಗಲೂ ಆಂಗ್ಲ ಭಾಷೆಯನ್ನು ಅವಲಂಭಿಸದೇ ತಮ್ಮ ಮಾತೃ ಭಾಷೆಯಲ್ಲೇ ವ್ಯವಹರಿಸುತ್ತಿದ್ದರೂ ಗಣನೀಯ ಪ್ರಗತಿ ಸಾಧಿಸಿವೆ. ಹಾಗೆಯೇ ಭಾರತದಲ್ಲೂ ಪರಭಾಷಾವಲಂಭನೆ ತೊರೆದು ಮಾತೃಭಾಷೆಯಲ್ಲೇ ಪ್ರಗತಿ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು. ವಿವಿಧ ನ್ಯಾಯಾಲಗಳಲ್ಲಿನ ವಕೀಲರು ಕನ್ನಡದಲ್ಲೇ ವಾದ ಮಾಡಲು ಮುಂದಾಗಬೇಕು. ಇದರಿಂದ ನ್ಯಾಯಾಧೀಶರಿಗೆ ಕನ್ನಡದಲ್ಲೇ ತೀರ್ಪು ನೀಡಲು ಅನುಕೂಲವಾಗುತ್ತದೆ ಎಂದು  ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.


ಕನ್ನಡ ತೀರ್ಪುಗಳ ಸಂಪುಟ: ಇದುವರೆಗೆ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯಲ್ಲಿ ಹೊರಬಂದಿರುವ ತೀರ್ಪುಗಳ ಸಂಪುಟ ರಚಿಸಿ ಪ್ರಕಟಿಸಲಾಗುವುದು ಎಂದು ಇದೇ ಸಂದರ್ಭ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‍ಕುಮಾರ್ ತಿಳಿಸಿದರು.


 ಈ ಪ್ರಕಟಣೆ ಮೂಲಕ ತೀರ್ಪುಗಳನ್ನು ಜನ ಸಾಮಾನ್ಯರಿಗೆ ತಿಳಿಸುವುದು ಸರ್ಕಾರದ ಉದ್ದೇಶ. ನ್ಯಾಯಾಲಯಗಳಲ್ಲಿ ಕನ್ನಡ ಭಾಷೆ ಬಳಸುವುದಕ್ಕೆ ಪೂರಕವಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದರು.


ಸರ್ಕಾರಿ ಕಚೇರಿಗಳಲ್ಲಿ ಮಾತೃಭಾಷೆ ಕಡ್ಡಾಯವಾಗಿ ಬಳಸಬೇಕೆಂಬ ನಿಯಮಾವಳಿ ಇದ್ದರೂ ಅದು ಸಮರ್ಪಕವಾಗಿ ಅನುಷ್ಠಾನಗೊಳ್ಳದೇ ಇರುವುದು ದುರದೃಷ್ಟಕರ ಎಂದು ಸಚಿವರು ವಿಷಾದ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಗೃಹ ಸಚಿವ ಡಾ|ವಿ.ಎಸ್. ಆಚಾರ್ಯ, ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮೊದಲಾದವರು ಪಾಲ್ಗೊಂಡಿದ್ದರು. ಕನ್ನಡದಲ್ಲೇ ತೀರ್ಪು ನೀಡಿದ ಐವತ್ತೂ ನ್ಯಾಯಾಧೀಶರಿಗೆ ತಲಾ ಹತ್ತು ಸಾವಿರ ರುಪಾಯಿ ನಗದು ಹಾಗೂ ಫಲ, ತಾಂಬೂಲ ನೀಡಿ ಸನ್ಮಾನಿಸಲಾಯಿತು.

 


ಸಂಗ್ರಹ:http://www.kannadaprabha.com

Comments (1) >>
...
written by ಮಂಜುನಾಥ ಗೌಡ, August 19, 2008

ಹೌದು.... ಎಲ್ಲಾ ವಕೀಲರು ಕನ್ನಡದಲ್ಲೇ ವಾದ ಮಾಡಬೇಕು, ನ್ಯಾಯದಿಷರು ಕೂಡ ಕನ್ನಡದಲ್ಲೇ ತಮ್ಮ ತೀರ್ಪನು ನೀಡಬೇಕು.... ಇದಲ್ಲದೆ ನಮ್ಮ ನ್ಯಾಯಾಂಗದ ಎಲ್ಲ ವಿಷಯಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡಬೇಕು.....ಇದರಿಂದ ಸಮಸ್ತ ಕರ್ನಾಟಕದ ಜನತೆ ಕನ್ನಡದ ಆಗು ಹೋಗುಗಳ ಬಗ್ಗೆ ತಿಳಿದು ಕನ್ನಡ ಪರ ಹೊರಡಲು ಒಂದು ಮಾರ್ಗ ಕೂಡ ತೋರಿಸಿದಂತೆ ಕಾಣುವುದು ನಿಜ.....
- ಮಂಜುನಾಥ ಗೌಡ

Write comment

busy