|
![]()
ಬ್ರಿಟಿಷರ ಹಿಡಿತದಿಂದ ಬಿಡಿಸಿಕೊಂಡು ಭಾರತ ಸ್ವತಂತ್ರ ರಾಷ್ಟ್ರವಾದುದ್ದು ೧೯೪೭ರ ಆಗಸ್ಟ್ ೧೫ ರಂದು. ಈ ಮಹತ್ವದ ದಿನವನ್ನು ಕುರಿತು ಪಂಡಿತ್ ಜವಹರಲಾಲ್ ನೆಹರು ಹೀಗಂದರು -
’ಮಧ್ಯರಾತ್ರಿಯ ಗಂಟೆ ಬಾರಿಸುತ್ತಲೇ ಜಗತ್ತು ನಿದ್ರಿಸುತ್ತಿರುವ ವೇಳೆಯಲ್ಲಿ ಭಾರತ ಎಚ್ಚಿತ್ತು ಜೀವ ತಳೆಯುವುದು, ಸ್ವತಂತ್ರ್ಯ ವಾಗುವುದು. ಇತಿಹಾಸದಲ್ಲಿ ಎಂದಾದರೊಮ್ಮೆ ಬರುವ ಮಹತ್ವದ ಘಳಿಗೆಯೊಂದುಂಟು. ಅಂಥ ಘಳಿಗೆಯಲ್ಲಿ, ಹಳತಿನಿಂದ ಹೊಸತಿಗೆ ನಾವು ಪದಾರ್ಪಣ ಮಾಡುತ್ತೇವೆ. ಒಂದು ಯುಗ ಮುಕ್ತಾಯವಾಗುತ್ತದೆ. ದೀರ್ಘಕಾಲದಿಂದ ಅದುಮಿ ಹಿಡಿಯಲ್ಪಟ್ಟ ರಾಷ್ಟ್ರವೊಂದರ ಆತ್ಮ ನುಡಿಯತೊಡಗುತ್ತದೆ.”
೧೯೪೭ರ ಆಗಸ್ಟ್ ೧೪ರ ಮಧ್ಯರಾತ್ರಿಗೆ ತುಸುಮುಂಚೆ ಜವಹರಲಾಲ್ ನೆಹರು ಅವರು ಭಾರತೀಯ ರಾಜ್ಯಾಂಗ ರಚನಾ ಸಭೆಯನ್ನು ಕುರಿತು ಹೇಳಿದ ಮಾತುಗಳು ಇವು.
ನಮ್ಮ ದೇಶ ಸ್ವಾತಂತ್ರ್ಯವನ್ನು ಪಡೆದ ರೀತಿ ಇತರ ಎಲ್ಲಾ ದೇಶಗಳಿಗಿಂತಲೂ ಭಿನ್ನವಾದುದ್ದು. ಈ ಸ್ವಾತಂತ್ರ್ಯ ಹೋರಾಟ ಸುಮಾರು ಒಂದು ನೂರು ವರ್ಷ ನಡೆಯಿತು. ೧೮೫೭ರ ಸಿಪಾಯಿ ದಂಗೆಯನ್ನು ’ಭಾರತ’ದ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮ’ ಎಂದೇ ಕರೆಯುತ್ತಾರೆ. ಇದಕ್ಕೆ ಒಂದು ಶತಮಾನದ ಹಿಂದೆ ನಡೆದ ಪ್ಲಾಸೀಕದನದಲ್ಲಿ ಬ್ರಿಟಿಷರಿಗೆ ದೊರೆತ ವಿಜಯ ಭಾರತದಲ್ಲಿ ಅವರು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಲು ಸಹಾಯ ಮಾಡಿತು. ಈ ವಿಜಯದಿಂದ ಬಂಗಾಳದಲ್ಲಿ ಬೇರು ಬಿಟ್ಟ ಬ್ರಿಟಿಷರು ಕ್ರಮಕ್ರಮವಾಗಿ ಭಾರತದ ವಿವಿಧ ಭಾಗಗಳ ಮೇಲೆ ತಮ್ಮ ಹಿಡಿತವನ್ನು ಬಲಪಡಿಸಿಕೊಂಡು ಆಳುವ ಅರಸರಾದರು. ಸ್ವಂತ ಲಾಭಕ್ಕಾಗಿ ನಾನಾ ರೀತಿಯ ಶೋಷಣೆ, ಭಾರತೀಯರ ಬಗ್ಗೆ ಅನಾದರ ಆರಂಭವಾಗಿ, ಬೆಳೆಯುತ್ತಲೇ ಹೋಯಿತು. ಬ್ರಿಟಿಷರು ತಮ್ಮದೇ ರಾಜ್ಯವನ್ನು ವಿಸ್ತರಿಸುತ್ತಾ ಹೋದರು.
ಸ್ವಾತಂತ್ರ್ಯ ಹೋರಾಟಕ್ಕೆಂದೇ ರೂಪುಗೊಂಡ ಸಂಸ್ಥೆ, ಭಾರತ ರಾಷ್ಟ್ರೀಯ ಕಾಂಗ್ರೇಸ್ ೧೮೮೫ ರ ಡಿಸೆಂಬರ್ ೨೮ರಂದು ರೂಪುಗೊಂಡಿತು. ಕಾಂಗ್ರೆಸ್ಸಿನ ಮುಂಚೂಣಿಯಲ್ಲಿದ್ದ ಬಾಲಗಂಗಾಧರ ತಿಲಕ್, ಮೋತಿಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಮುಂತಾದವರು ಕೆಲವು ಬಾರಿ ಮಹಾತ್ಮಗಾಂಧಿಯವರ ಅಭಿಪ್ರಾಯಗಳನ್ನು ಬದಲಿಸಲು ಪ್ರಯತ್ನಿಸಿದರು. ಸ್ವಾತಂತ್ರ್ಯ ಗಳಿಸಲು ಅಹಿಂಸಮಾರ್ಗ, ಚಳವಳಿಗಳಷ್ಟೇ ಸಾಲದು ಎಂದು ಕೆಲವರು ಹಿಂಸಾತ್ಮಕ ಪ್ರತಿಭಟನೆಗಳನ್ನು ರೂಪಿಸಿದರು.
ಸ್ವಾತಂತ್ರ್ಯ ಸಂಗ್ರಾಮ ಬಿರುಸಾದಾಗ ಬ್ರಿಟಿನ್ನಿನ ಸರ್ಕಾರ ತನ್ನ ಮಿಲಿಟರಿ ಅಧಿಕಾರಿಗಳ, ರಾಜಕಾರಣಿಗಳ ಮೂಲಕ ಸಂಧಾನಗಳನ್ನು ಆರಂಭಿಸಿತು. ಎಷ್ಟೋ ವರ್ಷ ಈ ’ಮಾತುಕತೆಗಳು’ ನಡೆದವು. ೧೯೪೨ರ ಆಗಸ್ಟ್ ೨ರಂದು ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಚಳವಳಿ ಭಾರತದಲ್ಲೆಲ್ಲಾ ಹರಡಿ ಉಗ್ರರೂಪ ತಾಳಿತು. ಈ ಚಳವಳಿಯನ್ನು ಭಂಗಗೊಳಿಸಲು ಸರ್ಕಾರ ನಡೆಸಿದ ಕ್ರೂರ ದಬ್ಬಾಳಿಕೆಯ ಕ್ರಮಗಳು ವಿಫಲವಾದವು.
ಎರಡನೆಯ ಮಹಾಯುದ್ಧ ಕೊನೆಯ ಹಂತವನ್ನು ಮುಟ್ಟುತ್ತಿದ್ದಂತೆ, ೧೯೪೭ರ ಆದಿಭಾಗದಲ್ಲಿ ಭಾರತೀಯರ ಮಂತ್ರಿಮಂಡಲವನ್ನು ರೂಪಿಸುವ ಪ್ರಯತ್ನ ನಡೆಯಿತು. ಆದರೆ ಈ ಮಂತ್ರಿಮಂಡಲದಲ್ಲಿ ವಿವಿಧ ಪಕ್ಷ ಪಂಗಡಗಳ ಸಂಖ್ಯಾಬಲ ಎಷ್ಟಿರಬೇಕೆಂಬ ಬಗೆಗೆ ಕಾಂಗ್ರೇಸ್ ಮತ್ತು ಮುಸ್ಲಿಂ ಲೀಗ್‌ಗಳ ನಡುವೆ ಒಮ್ಮತ ಏರ್ಪಡಲಿಲ್ಲ. ಆದ ಕಾರಣ ಈ ಪ್ರಯತ್ನ ಫಲಿಸಲಿಲ್ಲ.
ಯುದ್ಧಾನಂತರ ಬ್ರಿಟನ್ನಿನಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿತು. ಅದು ರಾಜಕೀಯ ಮುಗ್ಗಟ್ಟಿನ್ನು ನಿವಾರಿಸಲು ಪ್ರಯತ್ನಿಸಿತು. ಮುಂದುವರೆದ ಪ್ರಯತ್ನಗಳ ಫಲವಾಗಿ, ೧೯೪೭ರ ಮಾರ್ಚನಲ್ಲಿ ಸರ್ ಮೌಂಟ್ ಬ್ಯಾಟನ್ ವೈಸ್ ರಾಯ್ ಆಗಿ ಅಧಿಕಾರ ವಹಿಸಿಕೊಂಡರು. ಸಂಧಾನ ನಡೆಸಿದ ಮೇಲೆ ಭಾರತವನ್ನು ಇಬ್ಭಾಗ ಮಾಡಿ ಭಾರತ, ಪಾಕಿಸ್ತಾನಗಳೆರಡಕ್ಕು ಸ್ವಾತಂತ್ರ್ಯ ಕೊಡುವ ನಿರ್ಣಯವಾಯಿತು. ಹೀಗಾಗಿ ಪ್ರತಿವರ್ಷ ಆಗಸ್ಟ್ ೧೫ ರಂದು ರಾಷ್ಟ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತದೆ. ಭಾರತದ ಇತಿಹಾಸದಲ್ಲಿ ಹಳೆಯ ಯುಗ ಕೊನೆಗೊಂಡು ಹೊಸ ಮನ್ವಂತರ ಆರಂಭವಾದ ಪವಿತ ದಿನವೇ ಸ್ವಾತಂತ್ರೋತ್ಸವ. ಇದನ್ನು ಕುರಿತು ಶ್ರೀ ಅರವಿಂದರು ಹೇಳುವಂತೆ ’ಅಖಿಲ ಮಾನವ ಕುಲದ ರಾಜಕೀಯ, ಸಾಮಾಜಿಕ , ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಭವಿಷ್ಯವನ್ನು ರೂಪಿಸುವ ಕಾರ್ಯದಲ್ಲಿ ಪ್ರಭಾವಶಾಲಿಯಾದ ಅವ್ಯಕ್ತ ಸಾಮರ್ಥ್ಯವನ್ನೊಳಗೊಂಡ ಒಂದು ಶಕ್ತಿ ಸಂಪನ್ನ ರಾಷ್ಟ್ರದ ಪದಾರ್ಪಣವನ್ನು ಈ ದಿನ ಸೂಚಿಸುತ್ತದೆ.
ಈ ವಾರ್ಷಿಕೋತ್ಸವವನ್ನು ಆಚರಿಸಬೇಕಾದ್ದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಸ್ವಾತಂತ್ರ್ಯದ ಹೋರಾಟ ನಮಗೆ ಚಿರಸ್ಪೂರ್ತಿದಾಯಕವಾಗಲೆಂದು ಹಾರೈಸುವುದೂ, ಮುಂದಿನ ಭವಿಷ್ಯ ಚಿಂತನೆಗಾಗಿ ಆರ್ಥಿಕ, ರಾಜಕೀಯ ಇತ್ಯಾದಿ ಸರ್ವಕ್ಷೇತ್ರಗಳ ಪ್ರಗತಿಯನ್ನು ಯೋಜಿಸುವುದು ಇದರ ಅನಿವಾರ್ಯ ಕರ್ತವ್ಯವಾಗಿದೆ. ಆದ್ದರಿಂದ ಇದು ರಾಷ್ಟ್ರದ ಗೌರವವನ್ನು ಕಾಪಾಡುವ ದಿನ.
ಭಾರತಾಂಬೆಯ ಮಕ್ಕಲಾಗಿ ಹುಟ್ಟಿ ದೇಶಕ್ಕೆ ಸ್ವಾರ್ಥಪರ ಸೇವೆಯನ್ನು ಸಲ್ಲಿಸಿದರೆ ಅದು ಮಾತೃದ್ರೋಹವಾದಂತೆ ಅಂತೆಯೇ ಭಾರತಾಂಬೆಯ ಸೇವೆಗಾಗಿ ಅರ್ಥಾತ್ ಭಾರತೀಯರ ಸೇವಗಾಗಿ ಹೃತ್ಪೂರ್ವಕವಾದ ನಿಃಸ್ವಾರ್ಥಪರವಾದ ಸೇವೆಯನ್ನು ಪ್ರತಿಯೊಬ್ಬರೂ ಸಲ್ಲಿಸಬೇಕು.
ಭಾರತವು ಸ್ವಾತಂತ್ರ್ಯವನ್ನು ಪಡೆದ ಮೇಲೆ ಪ್ರತಿಯೊಬ್ಬ ಪ್ರಜೆಯೂ ಅನಭಿಷಿಕ್ತ ಪ್ರಭುವಿದ್ದಂತೆ. ಪ್ರತಿಯೊಬ್ಬನ ಮೇಲೆಯೂ ಹೆಚ್ಚಿನ ಜವಾಬ್ದಾರಿಯಿದೆ. ನಮ್ಮ ರಾಜ್ಯಾಂಗದ ಎಲ್ಲಾ ಸೂತ್ರಗಳನ್ನು ನಾವೇ ನಿರೂಪಿಸಿಕೊಳ್ಳುವ ಹೊರೆಯನ್ನು ಹೊತ್ತಿದ್ದೇವೆ.ಆದ್ದರಿಂದ ಪ್ರತಿಯೊಬ್ಬನೂ ರಾಷ್ಟ್ರಸೇವೆಯ ಪವಿತ್ರ ಕಾರ್ಯಕ್ಕೆ ತನ್ನ ಬಾಳನ್ನು ಸಮರ್ಪಿಸಬೇಕು.
ಈ ದಿನ, ನಮ್ಮ ನಾಡಿನ ಗೌರವದ ಪ್ರತೀಕವಾಗಿರುವ ರಾಷ್ಟ್ರಧ್ವಜವನ್ನು ಹಾರಿಸುತ್ತೇವೆ. ಹೀಗೆ, ಸ್ವಾತಂತ್ರ್ಯದಿನಾಚರಣೆ, ಅತಿಮುಖ್ಯವಾದ ರಾಷ್ಟ್ರೀಯ ಹಬ್ಬ.
ಸಂಗ್ರಹ:http://www.kannadaprabha.com
|