|
ಬೀದರ್: ಸಾಹಿತ್ಯ ಸಮ್ಮೇಳನ ಜಾತ್ರೆ ಸ್ವರೂಪ ಪಡೆಯದೆ ಸರಳವಾಗಿ ನಡೆಸಿ, ಕನ್ನಡ ಹಾಗೂ ಸಾಹಿತ್ಯವನ್ನು ಜನ ಸಾಮಾನ್ಯರ ಬಳಿಗೆ ಕೊಂಡೊಯ್ಯುವ ಕಾರ್ಯಕ್ರಮವಾಗಬೇಕು ಎಂದು ಕಸಾಪ ಕೇಂದ್ರ ಸ್ಥಾನದ ಚುನಾವಣಾ ಅಭ್ಯರ್ಥಿ ಡಾ. ಎಸ್. ವಿದ್ಯಾಶಂಕರ ತಿಳಿಸಿದರು.
ಅವರು ನಗರದಲ್ಲಿ ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಆಯೋಜಕರು ಸಮ್ಮೇಳನವನ್ನು ವ್ಯವಹಾರಿಕವಾಗಿ ಮಾಡಲು ಹೊರಟಿದ್ದಾರೆ. ಹೀಗಾಗಿ ಅದು ಜಾತ್ರೆ. ಎಂಬ ಭಾವನೆ ತಾಳುತ್ತಿದೆ. ಎಂದು ಅಭಿಪ್ರಾಯಪಟ್ಟರು. ಸಮ್ಮೇಳನ ಕನ್ನಡಪರ ಚಟುವಟಿಕೆಗೆ ವೇದಿಕೆ ಕಲ್ಪಸುವಂತಾಗಬೇಕು. ಮಾಹಿತಿ ತಂತ್ರಜ್ಞಾನ, ಗಡಿ ಸಮಸ್ಯೆ ಹಾಗೂ ಕನ್ನಡಕ್ಕೆ ಕಾಡುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುವಂತಾಗಬೇಕು. ಯುವ ಸಾಹಿತಿಗಳ ಕಲೆಯನ್ನು ಗುರುತಿಸಲು ಮಾರ್ಗವಾಗಬೇಕು ಎಂದರು.
ಆರ್ಥಿಕ ಕೊರತೆ: ಸಾಹಿತ್ಯ ಪರಿಷತ್ ಆರ್ಥಿಕ ಕೊರತೆಯಿಂದ ಬಳಲುತ್ತಿದೆ. ಸರ್ಕಾರದ ಅನುದಾನ ಸಿಬ್ಬಂದಿಗಳ ವೇತನಕ್ಕೂ ಸಾಲದು. ಹೀಗಾಗಿ ಸಮ್ಮೇಳನಕ್ಕೆ ಹೆಚ್ಚಿನ ಹಣ ಪೋಲಾಗದಂತೆ ಸಿದ್ಧತೆ ಹೊಂದುವುದು ಅಗತ್ಯವಾಗಿದೆ ಎಂದರು.
ನೆರವಿಗೆ ಪ್ರಯತ್ನ : ಸರ್ಕಾರಕ್ಕೆ ಒಳ್ಳೆಯ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಂಶೋಧನಾತ್ಮಕ ಯೋಜನೆಗಳ ಬಗ್ಗೆ ಚರ್ಚಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿ, ನೆರವು ಪಡೆಯುವ ಉದ್ದೇಶ ತಮ್ಮದಾಗಿದೆ. ಅಲ್ಲದೆ, ಜನ ಸಮೂಹ ಹಾಗೂ ಸರ್ಕಾರದ ಅಂಗ ಸಂಸ್ಥೆಗಳಿಗೆ ಸಂಪರ್ಕಿಸಿ ನೆರವು ಪಡೆದು ಪರಿಷತ್ತನ್ನು ಆರ್ಥಿಕ ದುಸ್ಥಿತಿಯಿಂದ ಹೊರತರಲಾಗುವುದು ಎಂದರು.
ಕನ್ನಡಿಗರ ಸಮಸ್ಯೆಗಳಿಗೆ ಪರಿಷತ್‌ನ ೩ ವರ್ಷದ ಅವಧಿಯಲ್ಲಿ ಇಥ್ಯರ್ಥ ಮಾಡಲಾಗುವುದು ಜಿಲ್ಲಾ ಘಟಕದ ಅಧ್ಯಕ್ಷರೊಂದಿಗೆ ಸೇರಿ ಕನ್ನಡಪರ ತೀರ್ಮಾನ ಕೈಗೊಂಡು ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದರು.
ಕಳೆದ ೪ ದಶಕಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪರಿಷತ್‌ನ ಕೇಂದ್ರ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣದಲ್ಲಿದ್ದು, ರಾಜ್ಯಾದ್ಯಂತ ಪ್ರಚಾರ ಕೈಗೊಂಡಿದ್ದು, ಸಾಹಿತಿಗಳೊಂದಿಗೆ ತಮ್ಮ ಕನ್ನಡಪರ ನಿಲುವನ್ನು ಹಂಚಿಕೊಂಡಿದ್ದೇನೆ ಎಂದು ಡಾ. ವಿದ್ಯಾಶಂಕರ ಹೇಳಿದರು.
ಸಂಗ್ರಹ:http://www.kannadaprabha.com
|