ಹರಪನಹಳ್ಳಿ: ದಾವಣಗೆರೆ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹರಪನಹಳ್ಳಿಯಲ್ಲಿ ಫೆ.೨೩ ಮತ್ತು ೨೪ ರಂದು ನಡೆಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಇಲ್ಲಿನ ತಾಲೂಕು ಪಂಚಾಯ್ತಿ ರಾಜೀವಗಾಂಧಿ ಸಭಾಂಗಣದಲ್ಲಿ ಶನಿವಾರ ಮಾಜಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಅವರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ಜರುಗಿತು.
ಸಮ್ಮೇಳನ ನಡೆಸಲು ಅಗತ್ಯವಿರುವ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಮೆರವಣೆಗೆ ಸಮಿತಿ, ಆಹಾರ ಸಮಿತಿ, ಪ್ರಚಾರ ಸಮಿತಿ, ಸಲಹಾ ಸಮಿತಿಗಳನ್ನು ರಚಿಸಲಾಗಿದ್ದು, ಅವುಗಳ ಮಾಹಿತಿಯನ್ನು ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಚ್. ಮಲ್ಲಿಕಾರ್ಜುನ ಅವರು ಸಭೆಗೆ ತಿಳಿಸಿದರು. ಸಮ್ಮೇಳನದ ಹಣಕಾಸು ಸಮಿತಿ ಅಧ್ಯಕ್ಷರಾಗಿರುವ ಜಿ.ಪಂ. ಸದಸ್ಯ ಪಿ. ರಾಮನಗೌಡ ಅವರು ಜಿಲ್ಲಾ ಮಟ್ಟದ ಈ ಸಮ್ಮೇಳನಕ್ಕೆ ೬ ಲಕ್ಷ ರು.ಗಳ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಎಲ್ಲರೂ ಸಮ್ಮೇಳನದ ಯಶಸ್ವಿಗೆ ಸಹಕರಿಸುವಂತೆ ಎಂದು ಕೋರಿದರು.
ಮಾಜಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಜಿಲ್ಲೆಯ ವಿವಿಧ ತಾಲೂಕುಗಳಿಗೂ ಜವಾಬ್ದಾರಿ ಕೊಡಿ ಎಂದು ಹೇಳಿದ ಅವರು ಎಲ್ಲರ ಸಹಭಾಗಿತ್ವದಲ್ಲಿ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದರು.
ತೆಗ್ಗಿನಮಠ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ, ಹಣಕಾಸು ಸಮಿತಿ ಉಪಾಧ್ಯಕ್ಷ ಜಿ. ನಂಜನಗೌಡ, ಪುರಸಭಾ ಸದಸ್ಯರಾದ್ ಪಾಟೀಲ್ ಬೆಟ್ಟನಗೌಡ, ಡಿವೈಎಸ್ಪಿ ಎನ್. ಲಿಂಗಾರೆಡ್ಡಿ, ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಹೆಚ್. ಹೂಗಾರ, ಕಾರ್ಯದರ್ಶಿ ಎಂ.ಪಿ.ಚಂದ್ರಪ್ಪ, ನಾಗರಾಜ ಸಿರಿಗೇರಿ, ಹೊನ್ನಾವಳೀಯ ಉತ್ತಂಗಿ ಕೊಟ್ರೇಶ್, ಪ್ರಚಾರ ಸಮಿತಿ ಅಧ್ಯಕ್ಷ ಶರಣಪ್ಪ ರಡ್ಡೇರ, ಅನೇಕ ಮಂದಿ ಜನಪ್ರತಿನಿಧಿಗಳು, ಸಾಹಿತಿಗಳು ಉಪಸ್ಥಿತರಿದ್ದರು. ಅರ್ಜುನ ಪರಸಪ್ಪ ಪ್ರಾರ್ಥನೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಬಿ. ರಾಮಪ್ರಸಾದ್ ಗಾಂಧಿ ಸ್ವಾಗತ, ತಾಲೂಕು ಕಾರ್ಯದರ್ಶಿ ಬಿ. ವಿವೇಕಾನಂದಸಿಂಗ್ ನಿರೂಪಿಸಿದರು. ಸಭೆಯ ಕೊನೆಯಲ್ಲಿ ವಿರೇಶಬಣಕಾರ ಅವರು ಎಲ್ಲರನ್ನೂ ವಂದಿಸಿದರು.
ಸಂಗ್ರಹ:http://www.Kannadaprabha.com
|