|
Hana Galikege Vachanagala Balake Huggi Vishada |
|
|
Written by jayashree
|
|
ಬೀದರ್: ವಚನಗಳನ್ನು ಕೇವಲ ಭಾಷಣ, ಪುಸ್ತಕ ರಚನೆ, ಹಣ ಸಂಗ್ರಹಣೆಗೆ ವಸ್ತುವನ್ನಾಗಿ ಉಪಯೋಗಿಸುತ್ತಿದ್ದಾರೆ ಹೊರತು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿಲ್ಲ ಎಂದು ಪ್ರೊ. ಹುಗ್ಗಿ ಪಾಟೀಲ್ ವಿಷಾದ ವ್ಯಕ್ತಪಡಿಸಿದರು.
ಮಂಗಳವಾರ ಇಲ್ಲಿನ ಬಸವ ಮುಕ್ತಿ ಮಂದಿರದಲ್ಲಿ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವ ತತ್ವ ಭಾಷಣಕ್ಕೆ ಸೀಮಿತವಾಗದೆ ಬದುಕಿನ ಶೋಧನೆಗೆ ಬಳಕೆಯಾಗಬೇಕು ಎಂದು ಪ್ರೊ. ಹುಗ್ಗಿ ಪಾಟೀಲ ಪ್ರತಿಪಾದಿಸಿದರು.
ಬಸವಣ್ಣ ಕೊಟ್ಟ ಧರ್ಮ ಇನ್ನೂ ಸಂವಿಧಾನ ಬದ್ಧವಾಗಿ ಸ್ವೀಕಾರವಾಗಿಲ್ಲ. ಆದರೆ ನಾವು ಮಾತ್ರ ವಿಶ್ವಧರ್ಮ ಎಂದು ಹೇಳುತ್ತಿದ್ದೇವೆ ಎಂದರು.
ವಚನಗಳನ್ನು ತಿದ್ದುವ ಮೂಲಕ ವಚನ ಸಾಹಿತ್ಯವನ್ನು ಹಾಳು ಮಾಡಲಾಗುತ್ತಿದೆ. ವಚನ ಸಾಹಿತ್ಯವನ್ನು ಉಳಿಸಬೇಕು.
ಬಸವ ಭಕ್ತರು ಎಚ್ಚೆತ್ತುಕೊಂಡು ಬಗ್ಗಟ್ಟಾಗಿ ಇಂಥವರಿಗೆ ಬುದ್ಧಿ ಕಲಿಸಬೇಕು ಎಂದು ಕರೆ ನೀಡಿದರು. ಬಸವ ಕೇಂದ್ರದ ಕಾರ್ಯಾಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣ ಸಾಹಿತ್ಯದ ಮೇಲೆ ಅನ್ಯಾಯ ನಡೆಯುತ್ತಿದೆ. ರಾಜ್ಯದಲ್ಲಿನ ಸಾವಿರಾರು ಮಠಾಧೀಶರಿದ್ದರೂ ಒಬ್ಬ ಸ್ವಾಮೀಜಿಯೂ ಮಠ ಬಿಟ್ಟು ಹೊರಗೆ ಬರದಿರುವುದು ವಿಷಾದನೀಯ ಎಂದರು.
ಸಿಂದಗಿ ಗುರು ದೇವಾಶ್ರಾಮದ ಪೂಜ್ಯ ಶಾಂತಗಂಗಾಧರ ಸ್ವಾಮಿಗಳು ಆಶೀರ್ವಚನ ನೀಡಿದರು. ಬಸವ ಮುಕ್ತಿ ಮಂದಿರದ ಶಿವಯೋಗೀಷ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಚಂದ್ರಪ್ಪ ಜಾಬಾ ಸ್ವಾಗತಿಸಿದರೆ ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿ ಅಲ್ಲಮ ಪ್ರಭು ವಂದಿಸಿದರು.
ಸಂಗ್ರಹ: http://www.kannadaprabha.com
|