|
ದಾವಣಗೆರೆ: ಗ್ರಾಮೀಣ ಸಂಸ್ಕೃತಿ, ಜಾನಪದ ಸಾಹಿತ್ಯವನ್ನು ಪ್ರತಿಯೊಬ್ಬರೂ ಉಳಿಸಿ, ಬೆಳೆಸುವ ಮೂಲಕ್ ಅದರ ಸೊಗಡನ್ನು ಅರ್ಥೈಸಿ ಕೊಳ್ಳಬೇಕು ಎಂದು ಚಿತ್ರದುರ್ಗ ಆಕಾಶವಾಣಿ ಕೇಂದ್ರದ ಸ್ಮಿತಾ ಹೇಳಿದ್ದಾರೆ. ತಾಲೂಕಿನ ನೀರ್ಥಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಯಾಂಬಿಕಾ ಮಹಿಳಾ ಸ್ವಸಹಾಯ ಸಂಘ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಸೋಬಾನೆ ಗೀತೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಗ್ರಾಮೀಣ ಸಂಸ್ಕೃತಿ, ಜಾನಪದ ಸಾಹಿತ್ಯವನ್ನು ಉಳಿಸುವಂತಹ ಕೆಲಸ ಈಗ ಪ್ರಥಮಾದ್ಯತೆ ಮೇಲೆ ಆಗಬೇಕು. ಜೀವನದ ಅನುಭವಗಳಿಗೆ ಹಾಡುಗಳ ರೂಪಕೊಟ್ಟಿರುವುದು ಜಾನಪದವಾಗಿದೆ. ಇಂತಹ ವಿಶೇಷ ಕಲೆ ಉಳಿಸಿ, ಬೆಳೆಸುವ ಕೆಲಸ ಆಗಬೇಕು ಎಂದು ಅವರು ತಿಳಿಸಿದರು.
ಜಾನಪದ ಗಾಯಕ, ಆಶು ಕವಿ ಯುಗಧರ್ಮ ರಾಮಣ್ಣ ಮಾತನಾಡಿ, ೬೪ ವಿದ್ಯಾರ್ಥಿಗಳಲ್ಲಿ ಅಕ್ಷರ ವಿದ್ಯೆಯೆ ಶ್ರೇಷ್ಠ. ಅದನ್ನು ಸರ್ವರೂ ಪಡೆದು, ಆದರ್ಶ ವ್ಯಕ್ತಿಗಳಾಗಬೇಕು. ಈ ಮೂಲಕ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.
ಗ್ರಾಪಂ ಸದಸ್ಯ ಕೆ. ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಎಸ್‍ಡಿಎಂಸಿ ಅಧ್ಯಕ್ಷ ಎನ್.ಜಿ. ಮುನಿಸ್ವಾಮಿ, ಚಿತ್ರದುರ್ಗ ಆಕಾಶವಾಣಿ ಕೇಂದ್ರದ ಪ್ರವಾಚಕ ಲಕ್ಷ್ಮಿಪತಿ, ಭರಮಸಾಗರ ನೋಡಲ್ ಅಧಿಕಾರಿ ಲೋಲಕ್ಷಮ್ಮ, ಶಿಕ್ಷಕರಾದ ಎನ್,ಪಿ. ನಿಜಲಿಂಗಪ್ಪ, ಶಿವರುದ್ರಮ್ಮ, ವಿ.ಎಂ. ವೀರಬಸವಾಚಾರಿ, ಸಣ್ಣ ಹನುಮಕ್ಕ, ಮಲ್ಲಿಕಾರ್ಜುನಸ್ವಾಮಿ, ಎಚ್.ಎಲ್. ಪ್ರತಿಮಾ, ಜಿ.ಆರ್. ರಾಘವೇಂದ್ರ ಕುಮಾರ್, ಅಂಗನವಾಡಿ ಕಾರ್ಯಕರ್ತರಾದ ಪಾರ್ವತಮ್ಮ, ಮಹದೇವಯ್ಯ, ಅಂಜಿನಪ್ಪ ಇದ್ದರು.
ಗ್ರಾಮೀಣ ಸೊಗಡಿನ ಜಾನಪದ ಸಾಹಿತ್ಯದ ಹಾಡನ್ನು ಹಾಡಿದ ಯುಗಧರ್ಮ ರಾಮಣ್ಣ ಜನರನ್ನು ಮಂತ್ರ ಮುಗ್ದರನ್ನಾಗಿಸಿದರು.
ಸಂಗ್ರಹ:http://www.kannadaprabha.com
|