|
ಸಾಗರ: ಭವ್ಯ ಪರಂಪರೆಯ ಈ ನಾಡಿಗೆ ನಿಜವಾಗಿ ಕೊಡುಗೆ ನೀಡುವವರು ಸಾಹಿತಿಗಳು ಮತ್ತು ಲೇಖಕರೇ ವಿನಃ ರಾಜಕಾರಣಿಗಳಲ್ಲ. ಆದರೆ ಈಚಿನ ದಿನಗಳಲ್ಲಿ ರಾಜಕಾರಣಿಗಳ ಜನ್ಮದಿನವನ್ನು ಅದ್ದೂರಿಯಾಗಿ ನಡೆಸುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಸಾಹಿತಿ ಡಾ. ನಾ. ಡಿಸೋಜ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಭಾನುವಾರ ಏರ್ಪಡಿಸಿದ್ದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ೧೨೫ ನೇ ಜನ್ಮ ದಿನಾಚರಣೆ ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರಕವಿ ಗೋವಿಂದ ಪೈ ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದರೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿ ಚಿರಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು. ಕನ್ನಡದಲ್ಲಿ ಪ್ರಾಸಗಳ ಗೊಂದಲವಿದ್ದ ಕಾಲದಲ್ಲಿ ಗೋವಿಂದ ಪೈ ೧೯೧೧ ರ ಹೊತ್ತಿಗೆ ಪದ್ಯದಲ್ಲಿ ಪ್ರಾಸವನ್ನೇ ಬಳಸುವುದಿಲ್ಲ ಎಂದು ತೀರ್ಮಾನಿಸಿ ಕನ್ನಡದ ಕವಿಗಳಿಗೆ ಹೊಸ ದಾರಿಯನ್ನು ಹಾಕಿಕೊಟ್ಟಿದ್ದರು. ಮಾತೃಭಾಷೆ ಕೊಂಕಣಿಗೆ ಮರಾಠಿಯೇ ಮೂಲಭಾಷೆ ಎಂಬ ಜಿಜ್ಞಾಸೆ ಇದ್ದಾಗ ಸಂಶೋಧನೆಯ ಮೂಲಕ ಅದನ್ನು ಅಲ್ಲಗಳೆದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಸರ್ಕಾರ ಇವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು ಮುಂದಾಗಿರುವುದು ಶ್ಲಾಘನೀಯ ಸಂಗತಿ ಎಂದ ಡಿಸೋಜ ಸ್ಮಾರಕವನ್ನು ಶಿವರಾಮಕಾರಂತರ ಸ್ಮಾರಕದಂತೆ ನಿರಾಸಕ್ತಿಯಿಂದ ಕಾಪಾಡದೆ ಗೋವಿಂದ ಪೈಗಳ ಹಳೆಯ ವಸ್ತುಗಳನ್ನು ಸ್ನೇಹಿತರಿಗೆ ಬರೆದ ಪತ್ರಗಳನ್ನು, ಅವರ ಕೃತಿಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು. ಜೊತೆಗೆ ಅವರ ಅನೇಕ ಸಂಶೋಧನಾ ಪುಸ್ತಕಗಳು ಓದುಗರಿಗೆ ಸಿಗ್ಗುತ್ತಿಲ್ಲ. ಅದನ್ನು ಪುನರ್ ಮುದ್ರಿಸಿ, ಪ್ರಕಟಿಸುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮ.ಸ. ನಂಜುಂಡಸ್ವಾಮಿ, ಬಿಡುವಿಲ್ಲದ ಕೆಲಸಗಳ ನಡುವೆ ನೌಕರರಿಗೆ ಇತರ ವಿಷಯಗಳತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅವರ ಕ್ರಿಯಾಶೀಲತೆ ಕುಂಠಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ರಾಜ್ಯ ಪರಿಷತ್ ಸದಸ್ಯ ಎಂ.ಸಿ. ಪರಶುರಾಮಪ್ಪ, ಖಜಾಂಚಿ ದತ್ತಾತ್ರೇಯ ಬಿ.ಬೊಂಗಾಳೇ ಇದ್ದರು. ಮೋಹನ್ ಪ್ರಾರ್ಥಿಸಿದರು. ಡಿ. ಗಣಪತಪ್ಪ ಸ್ವಾಗತಿಸಿದರು. ಎಸ್. ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಲಪ್ಪ ವಂದಿಸಿದರು. ಬಿ.ಟಿ.ಬಸಪ್ಪ ನಿರೂಪಿಸಿದರು.
ಸಂಗ್ರಹ: http://www.kannadaprabha.com
|