|
Adigara Kavyadalle Vimarsheyu Ide |
|
|
Written by jayashree
|
|
ಬೆಂಗಳೂರು: ಖ್ಯಾತ ಕವಿ ಎಂ. ಗೋಪಾಲಕೃಷ್ಣ ಅಡಿಗರ ಬಗ್ಗೆ ಬರೆಯುವಂತಹದ್ದು ಬೇಕಾದಷ್ಟಿದೆ. ಅಡಿಗರನ್ನು ಕುರಿತಂತೆ ಪ್ರಕಟ ಆಗಿರುವ ಲೇಖನಗಳನ್ನು ನೋಡಿದರೆ ಅವರು ನಮ್ಮೊಡನಿದ್ದಾರೆ ಎಂಬ ಭಾವನೆ ಮೂಡುತ್ತದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಯು.ಆರ್. ಅನಂತಮೂರ್ತಿ ಭಾನುವಾರ ಹೇಳಿದರು.
ಎಸ್.ಆರ್.ವಿಜಯಶಂಕರ್ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ’ಪ್ರತಿಮಾಲೋಕ’ ಎಂ.ಗೋಪಾಲಕೃಷ್ಣ ಅಡಿಗ-ಮರು ಓದು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅನಂತಮೂರ್ತಿ, ಕೃತಿ ಕುರಿತಂತೆ ವ್ಯಾಖ್ಯಾನ, ವಿಮರ್ಶೆ ಮಾಡುವುದನ್ನು ಬಿಟ್ಟು ವಿಷಯದ ಬಗ್ಗೆ ಹೇಳಬೇಕು. ಓದುವಾಗ ತೆರೆದ ಮನಸಿರಬೇಕು ಎಂದರು.
ಕಾವ್ಯ ಕುರಿತ ಮಾತು ಕಾಲದಿಂದ ಕಾಲಕ್ಕೆ ಬದಲಾಗಿದೆ. ಇವುಗಳ ವಿಮರ್ಶೆ ಮಾಡುವವರು ತಮ್ಮ ವಿಮರ್ಶಾ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇಂದು ಬಂದಿದೆ ಎಂಬ ಅನಿಸಿಕೆ ವ್ಯಕ್ತಪಡಿಸಿದ ಅವರು, ಓದುಗರ ಪಂಚೇಂದ್ರಿಯ ಜಾಗೃತಗೊಳಿಸಬೇಕು ಎಂದರು.
ವ್ಯಾಖ್ಯಾನ ಮಾಡದೆ ಪ್ರಸಂಗವನ್ನು ಹೇಗೆ ವಿವರಿಸಬಹುದು ಎಂಬುದನ್ನು ವಿಮರ್ಶಕರು ಆಲೋಚಿಸಿ ಮಾಡಬೇಕು ಎಂದು ಸಲಹೆ ನೀಡಿದರು. ಗೋಪಾಲಕೃಷ್ಣ ಅಡಿಗರ ಕಾವ್ಯದಲ್ಲೇ ವಿಮರ್ಶೆ ಇರುತ್ತೆ. ಅವರ ಕಾವ್ಯ ಮಸೂರ ಇದ್ದಂತೆ. ಅದು ನಿರಂತರವಾಗಿ ಪ್ರತಿಫಲ ನೀಡುತ್ತದೆ. ವಿಮರ್ಶೆಯ ಪರಿಭಾಷೆ ಬದಲಾಗಬೇಕು ಎಂದು ಅತಿಥಿಯಾಗಿದ್ದ ಪ್ರೊ|ಕಿ.ರಂ ನಾಗರಾಜ್ ಹೇಳಿದರು.
ಲೋಕಕ್ಕೆ ಕಾಣುವ ಮುಖದ ಹಿಂದಿನ ಲೋಕ ಕಾಣುವ ಯತ್ನವನ್ನು ಅಡಿಗರು ಮಾಡಿದ್ದರು. ಶಿವರಾಮ ಕಾರಂತ ವೇದಿಕೆಯ ಚಡಗ ಈ ಕೆಲಸಕ್ಕೆ ಸ್ಫೂರ್ತಿ ನೀಡಿದರು ಎಂದು ಕೃತಿಯ ಸಂಪಾದಕ ವಿಜಯಶಂಕರ್ ತಿಳಿಸಿದರು. ಇಂದು ಅಡಿಗರ ಬರಹಗಳನ್ನು ನಾವು ಏಕೆ ಓದಬೇಕು. ಎಂಬ ಬಗೆಗಿನ ಚಿಂತನೆಯನ್ನು ಪುಸ್ತಕದಲ್ಲಿ ಮೂಡಿಸುವ ಯತ್ನ ಇದು. ಗೋಪಾಲಕೃಷ್ಣ ಅಡಿಗರು ನಿಧನರಾದ ಐದು ವರ್ಷದ ನಂತರ ಕವಿ ಲಕ್ಷ್ಮೀನಾರಾಯಣ ಭಟ್ಟರ ಸಂಪಾದಕತ್ವದಲ್ಲಿ ’ಅನನ್ಯ’ (೧೯೯೭) ಹೊರಬಂತು. ೧೯೯೭-೨೦೦೭ ರ ಅವಧಿಯಲ್ಲಿ ಅಡಿಗರನ್ನು ಕುರಿತಂತೆ ೬೨ ಲೇಖನ ಪ್ರಕಟವಾಗಿದೆ. ಇದನ್ನು ಗಮನಿಸಿದರೆ ಅಡಿಗರು ಇಂದಿಗೂ ಪ್ರಸ್ತುತ ಎಂಬುದು ಅರಿವಾಗುತ್ತದೆ ಎಂದರು.
ಅಡಿಗರ ಕುರಿತ ಚಿಂತನೆ ನಡೆದಿದೆ. ನೆನಪಾಗಿ ಅವರು ಬರುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಈ ಪುಸ್ತಕವನ್ನು ಹೊರತರಲಾಗಿದೆ. ಪ್ರತಿಮೆಗಳು ಅಡಿಗರನ್ನು ನೆನಪಿಸುವುದರಿಂದ ಪುಸ್ತಕಕ್ಕೆ ಪ್ರತಿಮಾಲೋಕ ಎಂದು ಹೆಸರಿಸಲಾಗಿದೆ. ಕನ್ನಡ ಪ್ರತಿಮಾಲೋಕದ ಸಾಮ್ರಾಟ ಗೋಪಾಲಕೃಷ್ಣ ಅಡಿಗ ಎಂದರು.
ಸಂಗ್ರಹ:http://www.kannadaprabha.com
|