|
’ಆಂಗ್ಲ ಯೋಚನಾ ಲಹರಿ’ ಕನ್ನಡ ಸಾಹಿತ್ಯಕ್ಕೆ ತೊಡಕು : ಈಶ್ವರಯ್ಯ
ಇಂಗ್ಲೀಷ್ ಸಂಭಾಷಣೆ ನುರಿತ ಕಲೆ ಅಲ್ಲ, ಈ ಬಗೆಗಿನ ಭಯ ದೂರವಾಗಬೇಕು. ಈ ಕಾರಣಕ್ಕೆ ಮಾತೃ ಭಾಷೆಯನ್ನು ದೂರಮಾಡಿ, ಇಂಗ್ಲೀಷ್‍ನ್ನು ಅಪ್ಪುವುದು ಬೇಡ ಎಂದು ಪತ್ರಕರ್ತ, ವಿಮರ್ಶಕ ಈಶ್ವರಯ್ಯ ಹೇಳಿದ್ದಾರೆ.
ಭಾನುವಾರ ಇಲ್ಲಿನ ಫಿಲೋಮಿನಾ ಕಾಲೇಜಿನಲ್ಲಿ ತಾಲೂಕು ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆಯ ಸ್ವರ್ಶ, ಸಾಂಸ್ಕೃತಿಕ ಸ್ವರ್ಶ ಕಳೆದು ಆಂಗ್ಲ ಭಾಷೆಯಲ್ಲಿ ಯೋಚನಾ ಲಹರಿ ಹರಿದರೆ ಕನ್ನಡ ಭಾಷೆ, ಸಾಹಿತ್ಯಕ್ಕೆ ತೊಡಕಾಗುತ್ತದೆ. ಆದ್ದರಿಂದ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದರು ಈಶ್ವರಯ್ಯ
ಕೃತಿ ಚೆನ್ನಾಗಿದೆ ಎಂದು ತೀರ್ಮಾನವಾಗುವುದು ಓದುಗನ ನಿರ್ಧಾರದ ಮೇಲೆಯೇ ವಿನಃ ವಿಮರ್ಶಕನಿಂದಲ್ಲ. ಸಾಹಿತ್ಯ ಬಿಡುವಿನ ವೇಳೆಯ ಕಾಯಕವಾಗಿದ್ದು, ವಿಶ್ರಾಂತ ಮನಸ್ಸಿನಲ್ಲಿ ಮರುಕಳಿಸುವ ಭಾವನೆಯೇ ಸಾಹಿತ್ಯ ಆದರೆ ಬದಲಾದ ದೃಷ್ಠಿಕೋನದಲ್ಲಿ ಸಾಹಿತ್ಯ ಹಾಗೂ ಭಾಷೆಗೆ ಹಿನ್ನಡೆಯಾಗಿದೆ ಎಂದು ಅವರು ನುಡಿದರು.
ಆಡಳಿತದಲ್ಲಿ ಕನ್ನಡ: ಧ್ವಜಾರೋಹಣ ನೆರವೇರಿಸಿ ವಸ್ತು ಪ್ರದರ್ಶನ ಉದ್ಘಾಟಿಸಿದ ಸಹಾಯಕ ಕಮಿಷನರ್ ವಸಂತ ಕುಮಾರ್ ಮಾತನಾಡಿ, ಆಡಳಿತದಲ್ಲಿ ಕನ್ನಡವನ್ನು ಕಟ್ಟುನಿಟ್ಟಾಗೆ ಅನುಷ್ಠಾನಿಸಲಾಗುತ್ತಿದೆ. ಸಾರ್ವಜನಿಕರ ಮನವಿ, ಪತ್ರಗಳೂ ಕನ್ನಡದಲ್ಲೇ ಅಧಿಕಾರಿಗಳಿಗೆ ಸಲ್ಲಿಸುವಂತಾದರೆ, ಕನ್ನಡ ಭಾಷೆ ಇನ್ನಷ್ಟು ಗಟ್ಟಿಯಾಗಲು ಸಾಧ್ಯ ಎಂದರು.
ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಶ ಪ್ರದೀಪ್ ಕುಮಾರ್ ಕಲ್ಕೂರ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಪಂಚಾಯತ್ ಅಧ್ಯಕ್ಷ ಚನಿಲ್ ತಿಮ್ಮಪ್ಪ ಶೆಟ್ಟಿ ಮೆರವಣಿಗೆ ಉದ್ಘಾಟಿಸಿದರು.
’ಸ್ವರ್ಣರೇಖೆ’ ನೆನಪಿನ ಸಂಚಿಕೆಯನ್ನು ಕಾಲೇಜು ಸಂಚಾಲಕ ರೆ.ಫಾ.ಜೆರಾಲ್ಡ್ ಡಿಸೋಜ ಬಿಡುಗಡೆ ಮಾಡಿದರು.
ಕೃತಿ ಬಿಡುಗಡೆ: ನಾರಾಯಣ ರೈ ಕುಕ್ಕುವಳ್ಳಿ ಅವರ ’ಚಿಣ್ಣರ ಬಣ್ಣ’ ಮಕ್ಕಳ ಕವನ ಸಂಕಲನ, ಸಿ.ಎಚ್. ಕೃಷ್ಣಶಾಸ್ತ್ರಿ ಅವರ ’ಶಿಕ್ಷಣ ನೋಟ’ ಹಾಗೂ ಅಬ್ದುಲ್ ಸಮದ್ ಭಾವರ ’ಅರಳು ಮಲ್ಲಿಗೆ’ ಕವನ ಸಂಕಲನವನ್ನು ವಿ.ಬಿ.ಅರ್ತಿಕಜೆ, ಗೋಪಾಲಕೃಷ್ಣ ಶಗ್ರಿತ್ತಾಯದ ’ಒಳ್ಮುಡಿ’ ಕೃತಿಯನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಮಯ್ಯ, ವಿ.ಎಸ್. ನಾರಾಯಣರ ’ಪ್ರ್‍ಏರಣಾ’ ಕವನ ಸಂಕಲನವನ್ನು ತಾಲೂಕು ಕಸಾಪ ಅಧ್ಯಕ್ಷ ಜಿ.ಎಲ್. ಆಚಾರ್ಯ, ಗಣರಾಜ ಕುಂಬ್ಳೆ ವಿರಚಿತ ’ಪುಣ್ಯಕೋಟಿ’ ನಾಟಕ ಕೃತಿಯನ್ನು ಕಾಲೇಜು ಪ್ರಾಂಶುಪಾಲ ರೆ.ಫಾ.ಎಫ್.ಎಕ್ಸ್.ಗೋಮ್ಸ್ ಬಿಡುಗಡೆ ಮಾಡಿದರು.
ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸ್ವಾಗತಿಸಿ, ಸಂಚಾಲಕ ಪ್ರೊ. ಬಿ.ಜೆ.ಸುವರ್ಣ ಪ್ರಾಸ್ತಾವಿಕ ಮಾತನಾಡಿದರು. ಡಾ. ವರದರಾಜ ಚಂದ್ರಗಿರಿ ಪರಿಚಯಿಸಿದರು. ಡಾ.ಎಚ್.ಜಿ. ಶ್ರೀಧರ ವಂದಿಸಿದರು. ಚೇತನ ಕುಮಾರ್ ನಿರೂಪಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ, ಸಾಹಿತಿ ಎ.ಪಿ. ಮಾಲತಿ ವೇದಿಕೆಯಲ್ಲಿದ್ದರು.
ಸಂಗ್ರಹ:http://www.Kannadaprabha.com
|