|
ಜ.೩೦ ರಂದು ಬಿಎಲ್‌ಡಿಇ ಸಂಸ್ಥೆಯ ಆವರಣದಲ್ಲಿ ಆಯೋಜಿಸಿರುವ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿಯವರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ ಸಮಾರಂಭವನ್ನು ಯಶಸ್ವಿಗೊಳಿಸಲು ನಿರ್ಧರಿಸಲಾಯಿತು.
ನಗರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ|ಫ.ಗು. ಹಳಕಟ್ಟಿ ಸ್ಮಾರಕ ಭವನದಲ್ಲಿ ಸೋಮವಾರ ನಡೆದ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಧ್ವನಿಮತದ ನಿರ್ಣಯ ಅಂಗೀಕರಿಸಲಾಯಿತು.
ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಎಂ.ಬಿ. ಪಾಟೀಲ ಅವರು ಮಾತನಾಡಿ, ಡಾ| ಫ.ಗು. ಹಳಕಟ್ಟಿ ಅವರು ಬಸವಾದಿ ಶರಣರ ಸಮಗ್ರ ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದರು. ಬಹುತೇಕ ಪುಸ್ತಕಗಳು ಜೀರ್ಣಾವಸ್ಥೆಯಲ್ಲಿದ್ದವು. ಅವುಗಳನ್ನು ೪ ವರ್ಷಗಳಿಂದ ನಾಡಿನ ವಿವಿಧೆಡೆ ಸಂಗ್ರಹಿಸಿ ೧೫ ಸಂಪುಟಗಳಲ್ಲಿ ಸಮಗ್ರ ಸಾಹಿತ್ಯ ರಚಿಸಿದೆ. ಪಕ್ಷಾತೀತ, ಜಾತ್ಯತೀತವಾದ ಶರಣರ ನೆನಪಿನ ಈ ಸಮಾರಂಭವನ್ನು ಯಶಸ್ವಿಗೊಳಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು. ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಅಧ್ಯಕ್ಷ ಎಸ್.ಎಸ್. ತಂಬಾಕೆ ಅವರು, ಡಾ. ಹಳಕಟ್ಟಿಯವರ ಸಮಗ್ರ ಸಾಹಿತ್ಯ ಗ್ರಂಥಗಳನ್ನು ಐರಾವತದ ಮೇಲಿಟ್ಟು ಭವ್ಯ ಮೆರವಣಿಗೆ ಮೂಲಕ ಸಾರ್ವಜನಿಕರ ಗಮನ ಸೆಳೆಯಲಾಗುವುದು. ಈ ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಲು ನಾಡಿನ ವಿವಿಧೆಡೆಯಿಂದ ಅನೇಕ ಜಾನಪದ ತಂಡಗಳನ್ನು ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.
ಗಣ್ಯ ವರ್ತಕ ಡಿ.ಎಸ್. ಗುಡ್ಡೋಡಗಿ ಅವರು, ಹಳಕಟ್ಟಿಯವರ ಸಮಗ್ರ ಸಾಹಿತ್ಯ ಪ್ರಕಟಿಸುವ ಮೂಲಕ ಬಿಎಲ್‌ಡಿಇ ಸಂಸ್ಥೆ ಐತಿಹಾಸಿಕ ಕಾರ್ಯ ಮಾಡಿದೆ. ೧೨ನೇ ಶತಮಾನದ ಬಸವಣ್ಣನವರ ಹಾಗೂ ಸಮಕಾಲೀನ ಶರಣರ ವಚನಗಳನ್ನು ಸಂರಕ್ಷಿಸುವ ಕಾರ್ಯವನ್ನು ಸಂಸ್ಥೆ ಮಾಡಿದಂತಾಗಿದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಬಸವರಾಜ ಕುಂಬಾರ, ಹಾಸೀಂಪೀರ ವಾಲೀಕಾರ, ಲಕ್ಷ್ಮಿ ದೇಸಾಯಿ, ಎಂ.ಜಿ. ಯಾದವಾಡ, ತಮ್ಮಣ್ಣ ಹಂಗರಗಿ ಮಾತನಾಡಿದರು. ವೇದಿಕೆಯಲ್ಲಿ ಬಿಎಲ್‌ಡಿಇ ಸಂಸ್ಥೆಯ ಉಪಾಧ್ಯಕ್ಷ ಬಿ.ಆರ್. ಪಾಟೀಲ ಲಿಂಗದಳ್ಳಿ, ಎಂ.ಎ. ಪಾಟೀಲ ಬಿಜ್ಜರಗಿ, ಗುರುಸಂಗಪ್ಪ ವಾರದ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ. ಪಾಟೀಲ, ವೀರಶೈವ ಮಹಾಸಭೆ ಅಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ಬಿಎಲ್‌ಡಿಇ ಸಂಸ್ಥೆಯ ನಿರ್ದೇಶಕ ಕೆ.ಡಿ. ಪಾಟೀಲ, ಎಚ್.ಆರ್. ಬಿರಾದಾರ, ರಾಜುಗೌಡ ಪಾಟೀಲ, ಅಪ್ಪುಗೌಡ ಮನಗೂಳಿ, ಸುರೇಶ ಪಾಟೀಲ ಸಾಸನೂರ, ಪ್ರಶಾಂತ ದೇಸಾಯಿ, ಸಂಗರಾಜ ದೇಸಾಯಿ, ಸಂಗರಾಜ ದೇಸಾಯಿ, ಬಿ.ಕೆ. ಕಲ್ಲೂರ, ಸಿದ್ದಣ್ಣ ಜಾಲಗೇರಿ, ಶೃಂಗಾರಗೌಡ ಪಾಟೀಲ, ಅಣ್ಣಪ್ಪ ಖೈನೂರ, ಕಲ್ಲೂರ ಮುಂತಾದವರು ಇದ್ದರು.
ಸಂಗ್ರಹ:http://www.kannadaprabha.com
|