ಡಾ| ಯು.ಆರ್. ಅನಂತಮೂರ್ತಿ ಅವರ ’ಸಂಸ್ಕಾರ’ ಕಾದಂಬರಿ ಕೇವಲ ೨೫ ರುಪಾಯಿ. ಎಚ್. ನರಸಿಂಹಯ್ಯ ಅವರ ಜೀವನ ಚರಿತ್ರೆ ’ಹೋರಾಟದ ಹಾದಿ’ಗೆ ೫೦ ರುಪಾಯಿ. ಪೂರ್ಣಚಂದ್ರ ತೇಜಸ್ವಿ ಅವರ ’ಚಿದಂಬರ ರಹಸ್ಯ’ ಕಾದಂಬರಿ ಬರೀ ೨೫ ರುಪಾಯಿ. ಆಲೂರು ವೆಂಕಟರಾಯರ ’ಕರ್ನಾಟಕ ಗತವೈಭವ’ ಕೇವಲ ೪೦ ರುಪಾಯಿ.
ಇದೇನಿದು, ಇಂಥ ಅಮೂಲ್ಯ ಹಾಗೂ ಸಂಗ್ರಹಯೋಗ್ಯ ಪುಸ್ತಕಗಳಿಗೆ ಇಷ್ಟೊಂದು ಕಡಿಮೆ ಬೆಲೆ ಎಂದು ಆಶ್ಚರ್ಯವಾಗಬಹುದು. ಸುವರ್ಣ ಕರ್ನಾಟಕ ವರ್ಷಾಚರಣೆ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಂದಲ್ಲ, ಎರಡಲ್ಲ, ಇಂಥ ೧೦೦ಅಮೂಲ್ಯ ಕೃತಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡುತ್ತಿದೆ.
ಇದರಲ್ಲಿ ಅರ್ಧದಷ್ಟು ಪುಸ್ತಕಗಳ ಬೆಲೆ ಕೇವಲ ೨೫ ರುಪಾಯಿ ನಿಗದಿಪಡಿಸಿದ್ದರೆ, ಇನ್ನೂ ಕೆಲವಕ್ಕೆ ೪೦ ಮತ್ತು ೫೦ ರುಪಾಯಿ. ಕನ್ನಡಿಗರಿಗೆ ಸುಲಭ ಬೆಲೆಯಲಿ ಪುಸ್ತಕಗಳು ದೊರಕಬೇಕು ಎಂಬ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ.
ಗುರುವಾರ ಬಿಡುಗಡೆ: ಆಧುನಿಕ ಕನ್ನಡ ಸಾಹಿತ್ಯ ಬೇರೆ ಬೇರೆ ಕಾಲಘಟ್ಟಗಳಲ್ಲಿ ಪ್ರಕಟವಾದ ಮಹತ್ವದ ಕೃತಿಗಳನ್ನು ಪರಿಚಯಿಸುವ ಉದ್ದೇಶದ ’ಸುವರ್ಣ ಸಾಹಿತ್ಯ ಗ್ರಂಥಮಾಲೆ’ಯ ೧೦೦ ಪುಸ್ತಕಗಳ ಬಿಡುಗಡೆ ಗುರುವಾರ ನಡೆಯಲಿದೆ. ಬೆಳಗ್ಗೆ ೧೧ಗಂಟೆಗೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಲೇಖಕ ಪ್ರೊ| ದೇ.ಜವರೇಗೌಡ ಈ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಕೃತಿಗಳ ಕುರಿತು ಸಾಹಿತಿ ಡಾ|ಹಂಪ ನಾಗರಾಜಯ್ಯ ಮಾತನಾಡಲಿದ್ದು, ಹಿರಿಯ ವಿಮರ್ಶಕ ಪ್ರೊ|ಎಲ್. ಎಸ್.ಶೇಷಗಿರಿರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಐ.ಎಂ. ವಿಠ್ಠಲಮೂರ್ತಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದರು.
ಸುವರ್ಣ ಕರ್ನಾಟಕ ವರ್ಷಾಚರಣೆ ಅಂಗವಾಗಿ ಕನ್ನಡ ಸಾಹಿತ್ಯ ಸೃಜನಶೀಲ ಹಾಗೂ ಸೃಜನೇತರ ಪ್ರಕಾರಗಳ ಪ್ರಕಟಣಾ ಯೋಜನೆ ಈ ಸುವರ್ಣ ಸಾಹಿತ್ಯ ಗ್ರಂಥಮಾಲೆ. ಕನ್ನಡ ಜ್ಞಾನಪೀಠ ಪುರಸ್ಕೃತರ ಕೃತಿಗಳಿಂದ ಹಿಡಿದು ಉತ್ತಮ ಕಾದಂಬರಿ, ನಾಟಕ, ಪ್ರವಾಸ ಕಥನ , ಜೀವನ ಚರಿತ್ರೆ, ವಿಮರ್ಶಾ ಲೇಖನ, ವೈಚಾರಿಕ ಲೇಖನ,ಅ ವೈಜ್ಞಾನಿಕ ಲೇಖನ, ಪ್ರಾತಿನಿಧಿಕ ಕಾವ್ಯ ಸಂಪುಟ, ಕಥಾ ಸಂಪುಟ, ಜಾನಪದ ಸಂಪುಟ, ನಾಟಕ ಸಂಪುಟ ಮೊದಲಾದವುಗಳನ್ನು ಈ ಮಾಲೆ ಒಳಗೊಂಡಿದೆ ಎಂದರು.
ಈ ಗ್ರಂಥಮಾಲೆ ಪ್ರಕಟಣಾ ಯೋಜನೆಗೆ ಪುಸ್ತಕಗಳನ್ನು ಆಯ್ಕೆ ಮಾಡಲು ಡಾ|ಚಂದ್ರಶೇಖರ್ ಕಂಬಾರ, ಪ್ರೊ|ಕಮಲಾ ಹಂಪನಾ, ಪ್ರೊ|ಜಿ.ವೆಂಕಟಸುಬ್ಬಯ್ಯ, ಪ್ರೊ|ಚಂದ್ರಶೇಖರ್ ಪಾಟೀಲ, ಡಾ|ಬಸವರಾಜ ಕಲ್ಗುಡಿ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್.ಜಿ.ಸಿದ್ದರಾಮಯ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಗೀತಾ ನಾಗಭೂಷಣ, ನಾಟಕ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ ಕಪ್ಪಣ್ಣ ಮೊದಲಾದವರು ನೆರವು ನೀಡಿದ್ದಾರೆ ಎಂದು ತಿಳಿಸಿದರು.
೧೦೦ಪುಸ್ತಕಕ್ಕೆ ೩೦೦೦ ರು: ಈ ೧೦೦ಪುಸ್ತಕಗಳ ಒಟ್ಟು ಬೆಲೆ ೩,೬೨೦ ರುಪಾಯಿ. ಆದರೆ, ೧೦೦ ಪುಸ್ತಕಗಳ ಸೆಟ್ ಖರೀದಿಸಿದರೆ ಕೇವಲ ೩೦೦೦ ರುಪಾಯಿ.
ಒಟ್ಟು ೧೦೦ ಕೃತಿಗಳ ಪೈಕಿ ಸೃಜನಶೀಲ ಪ್ರಕಾರದ ೫೯ ಪುಸ್ತಕಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸೃಜನೇತರ ಪ್ರಕಾರದ ೪೧ ಪುಸ್ತಕಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಮುದ್ರಿಸಿ ಕೊಟ್ಟಿದೆ.
ಈ ಸುವರ್ಣ ಸಾಹಿತ್ಯ ಗ್ರಂಥಮಾಲೆಯ ೧೦೦ ಪುಸ್ತಕಗಳೊಂದಿಗೆ ಕರ್ನಾಟಕ, ಕರ್ನಾಟಕ ದರ್ಶನ, ಸಂಸ್ಕೃತಿ ಹಾಗೂ ಕರ್ನಾಟಕ ಪರಂಪರೆಯ ಸಂಪುಟ ೧ ಮತ್ತು ೨ ನ್ನು ಬಿಡುಗಡೆ ಮಾಡಲಾಗುತ್ತಿದೆ.
ಸಂಗ್ರಹ:http://www.kannadaprabha.com
|