|
"ವಿ.ಎಂ. ಇನಾಂದಾರ್" (೧೯೧೨-೧೯೮೬)
ವೆಂಕಟೇಶ ಮಧ್ವರಾಯ ಇನಾಂದಾರರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಹುದಲಿಯಲ್ಲಿ; ೧೯೧೨ರ ಅಕ್ಟೋಬರ್ ಒಂದರಂದು. ತಂದೆ: ಮಧ್ವರಾವ್, ತಾಯಿ: ಕಮಲಾಬಾಯಿ.
ಬೆಳಗಾವಿ, ಅಥಣಿ, ಬಿಜಾಪುರ, ಮುಂಬಯಿಗಳಲ್ಲಿ ಅವರ ಶಿಕ್ಷಣ ನಡೆಯಿತು. ಬಿ.ಎ. ಪದವಿ ಪಡೆದು ಬಿಜಾಪುರದ ನ್ಯಾಯಾಲಯದಲ್ಲಿ ಭಾಷಾಂತರಕಾರರಾಗಿ ವೃತ್ತಿಜೀವನ ಆರಂಭಿಸಿದರು. ಆನಂತರ ೧೯೩೮ರಲ್ಲಿ ವಕೀಲಿ ಪರೀಕ್ಷೆ ಪಾಸು ಮಾಡಿ ೧೯೪೧ರಲ್ಲಿ ಇಂಗ್ಲೀಷ್ ಎಂ.ಎ. ಪದವಿ ಪಡೆದರು.
ಕಾಲೇಜು ಅಧ್ಯಾಪಕರಾಗಿ, ಮುಂಬಯಿ, ಧಾರವಾಡ, ಅಹಮದಾಬಾದ್, ಮಂಗಳೂರು, ಉಡುಪಿ, ಶಿವಮೊಗ್ಗದ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿದ್ದರು. ಕೆಲಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಯುಜಿಸಿ ಗೌರವ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.
ಮೂರಾಬಟ್ಟೆ-ಅವರ ಮೊದಲ ಕಾದಂಬರಿ. ಕನಸಿನ ಮನೆ, ಶಾಪ, ಸ್ವರ್ಗದ ಬಾಗಿಲು, ಈ ಪರಿಯ ಸೊಬಗು, ಮುಗಿಯದ ಕಥೆ, ಚಿತ್ರಲೇಖ, ಊರ್ವಶಿ, ನವಿಲುನೌಕೆ, ಬಾಡಿದ ಹೂ, ತ್ರಿಶಂಕು, ಯಾತ್ರಿಕರು, ವಿಜಯಯಾತ್ರೆ, - ಇತ್ಯಾದಿ ಕಾದಂಬರಿಗಳು. ವಿ.ಸ. ಖಾಂಡೇಕರ್ ಅವರ ಮರಾಠಿ ಕೃತಿಯ ಅನುವಾದ ’ಯಯಾತಿ’ ಹೆಸರಿನಲ್ಲಿ ಮಾಡಿದ್ದಾರೆ. ವಿಮರ್ಶೆ ಕ್ಷೇತ್ರದಲ್ಲಿ ಅವರ ಕೊಡುಗೆ ಇದೆ.
ಪೌರಾತ್ಯ ’ಪಾಶ್ಚಾತ್ಯ ಸಾಹಿತ್ಯ’ಗಳೆರಡರಲ್ಲೂ ಅವರು ಪಾಂಡಿತ್ಯ ಹೊಂದಿದ್ದರು. ಇಂಗ್ಲೀಷ್‍ನಲ್ಲೂ ಹಲವಾರು ಕೃತಿಗಳನ್ನು ಅವರು ಬರೆದಿದ್ದಾರೆ. ’ಶಾಪ’ ಕಾದಂಬರಿ ಚಲನಚಿತ್ರವಾಗಿದೆ. ಖಾಂಡೇಕರರ ಇನ್ನೊಂದು ಕಾದಂಬರಿ ’ದೋನಧೃವ್’ ಅನ್ನು ’ಎರಡು ಧೃವ’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ.
ಬಿ.ಎಂ.ಶ್ರೀ, ವಿಸೀ, ಶಿವರಾಮ ಕಾರಂತ-ದೃಷ್ಟಿಲಾಭ, ಕಾಳಿದಾಸದ ಕಥಾನಕಗಳು, ಮಂಗಲ್ಯಾಂಡಿನಲ್ಲಿ ಮೂರು ವಾರ, ಅವರ ಇತರ ಕೃತಿಗಳು.
ಅವರು ನಿಧನ ಹೊಂದಿದ್ದು ೧೯೮೬ರ ಜನವರಿ ೨೬ರಂದು.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ
|