|
Written by MS Rajanikanth
|
|
"ಶಂ.ಬಾ.ಜೋಶಿ" - (೧೮೯೬-೧೯೯೧)
ಶಂಕರ ಬಾಳಾದೀಕ್ಷಿತ ಜೋಶಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲ ಹೊಸೂರಿನಲ್ಲಿ; ೧೮೯೬ರ ಜನವರಿ ೪ ರಂದು. ಏಳನೇ ತರಗತಿಯವರೆಗೆ ಊರಿನಲ್ಲೇ ಶಾಲೆಗೆ ಹೋದರು. ಆನಂತರ ಪುಣೆಯಲ್ಲಿ ಸ್ವಲ್ಪಕಾಲ ಶಿಕ್ಷಣ ಪಡೆದು, ಧಾರವಾಡದ ಸರಕಾರಿ ತರಬೇತಿ ಕಾಲೇಜಿನಲ್ಲಿ ಓದಿ ೧೯೨೦ರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕರಾದರು. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಮೊದಲ ಕರ್ನಾಟಕ ಏಕೀಕರಣ ಸಮಾವೇಶಕ್ಕೆ ಕಾರ್ಯದರ್ಶಿಯಾದರು. ೧೯೨೬ರಿಂದ ೧೯೪೬ರಲ್ಲಿ ನಿವೃತ್ತರಾಗುವವರೆಗೆ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು.
ಕನ್ನಡ ಮರಾಠಿ ಎರಡೂ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದು, ಸಂಸ್ಕೃತ ಹಾಗೂ ಇಂಗ್ಲೀಷ್‍ಗಳಲ್ಲೂ ಪ್ರೌಢಿಮೆಯನ್ನು ಸಾಧಿಸಿದರು. ಇತಿಹಾಸ-ತತ್ವಶಾಸ್ತ್ರದಲ್ಲಿ ಆಸಕ್ತಿಹೊಂದಿ ಆಳವಾದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಶಂಬಾ ಅವರ ಮೊದಲ ಗ್ರಂಥ ಮಹರ್ಷಿ ಅರವಿಂದರನ್ನು ಕುರಿತದ್ದು. ೧೯೨೧ರಲ್ಲಿ ಅದು ಪ್ರಕಟವಾಯಿತು. ೧೯೩೯ರಲ್ಲಿ ಬಂದ ಕನ್ನಡದ ನೆಲೆ ಇನ್ನೊಂದು ಶ್ರೇಷ್ಠ ಗ್ರಂಥ ಭಾಷಾಶಾಸ್ತ್ರ, ಸಾಹಿತ್ಯ, ಇತಿಹಾಸ, ಹಿಂದೂಧರ್ಮ, ಉಪನಿಷತ್-ಹೀಗೆ ಹಲವು ವಿಷಯಗಳ ಕುರಿತು ಅವರ ನೂರಾರು ಲೇಖನಗಳು ಪ್ರಕಟಗೊಂಡಿವೆ. ಶಂಬಾ ಅವರದು ಮೂಲತಃ ಶೋಧಕನ ಮನಸ್ಸು. ಸಂಶೋಧನೆ ಅವರ ಕಾರ್ಯಕ್ಷೇತ್ರ. ಟಿಳಕ ಕಥಾಮೃತಸಾರ, ಅಗ್ನಿವಿದ್ಯೆ, ದಾರಿಯ ಬುತ್ತಿ, ಸಮಾಜ ದರ್ಶನ, ಭಾಷೆ ಮತ್ತು ಸಂಸ್ಕೃತಿ: ಪರಸ್ಪರ ಸಂಬಂಧ, ಕಂನಾಡವರ ಸಂಸ್ಕೃತಿಯ ಗತಿಸ್ಥಿತಿ, ಹಾಲುಮತ ದರ್ಶನ, ಋಗ್ವೇದಸಾರ; ನಾಗಪ್ರತಿಮಾ ವಿಚಾರ. ಬುದ್ಧನ ಜಾತಕ, ಕರ್ನಾಟಕದ ವೀರ ಕ್ಷತ್ರಿಯರು, ಉಪನಿಷತ್ ರಹಸ್ಯ, ಇತ್ಯಾದಿ. ಶಂಬಾ ಅವರ ಕೃತಿಗಳು ಆರು ಸಂಪುಟಗಳಲ್ಲಿ ಹೊರಬಂದಿವೆ.
ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆ - ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಮೈಸೂರು ವಿಶ್ವವಿದ್ಯಾಲಯವು ೧೯೭೧ರಲ್ಲಿ ಡಾಕ್ಟೋರೇಟ್ ನೀಡಿದೆ. ೧೯೮೧ರಲ್ಲಿ ಮಡಿಕೇರಿಯಲ್ಲಿ ನಡೆದ ೫೪ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.
ಶಂ.ಬಾ. ಅವರು ನಿಧನ ಹೊಂದಿದ್ದು ೧೯೯೧ರ ಸೆಪ್ಟೆಂಬರ್ ೨೮ರಂದು.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ
|