|
Written by MS Rajanikanth
|
"ಮುಳಿಯ ತಿಮ್ಮಪ್ಪಯ್ಯ"- (೧೮೮೮-೧೯೫೦)
ಮುಳಿಯ ತಿಮ್ಮಪ್ಪಯ್ಯನವರು ಹುಟ್ಟಿದ್ದು ೧೮೮೮ರ ಮಾರ್ಚ್ ೩ರಂದು, ದಕ್ಷಿಣ ಕನ್ನಡ ಜಿಲ್ಲೆಯ ಮುಳಿಯದಲ್ಲಿ ತಂದೆಯ ಹೆಸರು ಕೇಶವಭಟ್ಟ ತಾಯಿ ಮೂಕಾಂಬಿಕ.
ಊರಿನಲ್ಲೇ ಪ್ರಾಥಮಿಕ ಶಿಕ್ಷಣವನ್ನು ಅವರು ಪಡೆದರು. ಸಂಸ್ಕೃತ ವಿದ್ವಾಂಸರಾಗಿದ್ದ ಕಲ್ಲಜೆ ಕೃಷ್ಣಶಾಸ್ತ್ರಿಗಳಿಂದ ಸಂಸ್ಕೃತವನ್ನು ಕಲಿತರು. ಕನ್ನಡವನ್ನು ಸ್ವತಂತ್ರವಾಗಿ ಓದಿಕೊಂಡರು. ಅನಂತರ ಕಾಲ್ನಡಿಗೆಯಲ್ಲಿ ತಿರುವನಂತಪುರಕ್ಕೆ ಹೋಗಿ ಛತ್ರದಲ್ಲಿದ್ದುಕೊಂಡು ಅಲ್ಲಿನ ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತವನ್ನು ಕಲಿತರು. ನಂತರ ಮೈಸೂರಿಗೆ ಬಂದು ವಾರಾನ್ನ ಮಾಡಿಕೊಂಡು ಓದನ್ನು ಮುಂದುವರಿಸಿದರು.
ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ವೃತ್ತಿಯನ್ನು ಪ್ರಾರಂಭಿಸಿದರು. ೧೯೧೮ರಲ್ಲಿ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾದರು.
ಕನ್ನಡ - ಸಂಸ್ಕೃತಗಳೆರಡರಲ್ಲೂ ಅಪಾರ ಪಾಂಡಿತ್ಯವನ್ನು ಹೊಂದಿದ್ದ ಅವರ ಹಲವಾರು ಕೃತಿಗಳು ಪ್ರಕಟವಾಗಿವೆ. ಸೊಬಗಿನ ಬಳ್ಳಿ, ಪ್ರೇಮಸಾರ, ಬಡಹುಡುಗಿ, ನವನೀತ ರಾಮಾಯಣ- ಕಾವ್ಯಗಳು. ಆದಿಪುರಾಣ ಸಂಗ್ರಹ, ತ್ರಿಪುರ ದಾಹ, ಸಮಸ್ತ ಭಾರತಸಾರ ಗದ್ಯಾನುವಾದಗಳು. ಚಂದ್ರಾವಳಿ ವಿಲಾಸಂ, ನಡತೆಯ ನಾಡು ಹಗಲಿರುಳು-ನಾಟಕಗಳು. ಪಶ್ಚಾತ್ತಾಪ, ವೀರಬಂಕೆಯ - ಕಾದಂಬರಿಗಳು.
೧೯೧೬ರಿಂದ ೧೯೧೯ ರವರೆಗೆ ಕೋಗಿಲೆ ಎಂಬ ಪತ್ರಿಕೆಯನ್ನೂ ಅವರು ನಡೆಸಿದರು. ಸಂಶೋಧನಾ ಕ್ಷೇತ್ರದಲ್ಲೂ ಅವರ ಕೊಡುಗೆ ಇದೆ. ನಾಡೋಜ ಪಂಪ, ಕವಿರಾಜಮಾರ್ಗ ವಿವೇಕ, ಪಾರ್ತಿಸುಬ್ಬ-ಸಂಶೋಧನಾ ಕೃತಿಗಳು.
೧೯೩೧ರಲ್ಲಿ ಕಾರವಾರದಲ್ಲಿ ನಡೆದ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಲಕ್ಷ್ಮೇಶ್ವರದಲ್ಲಿ ನಡೆದ ಪಂಪನ ಸಹಸ್ರವಾರ್ಷಿಕೋತ್ಸವದ ಅಧ್ಯಕ್ಷ ಪೀಠವನ್ನು ತಿಮ್ಮಪ್ಪಯ್ಯನವರು ಅಲಂಕರಿಸಿದ್ದರು.
ಈ ಪಂಡಿತ ಚೇತನ ನಿಧನ ಹೊಂದಿದ್ದು ೧೯೫೦ರ ಜನವರಿ ೧೬ರಂದು.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ
|