|
Written by MS Rajanikanth
|
|
"ಎಚ್.ಎಲ್. ನಾಗೇಗೌಡ" - (೧೯೧೫)
ಹೆರಗನಹಳ್ಳಿ ಲಿಂಗೇಗೌಡ ನಾಗೇಗೌಡರು ಜನಿಸಿದ್ದು ೧೯೧೫ರ ಫೆಬ್ರವರಿ ೧೧ರಂದು. ತಂದೆ: ಲಿಂಗೇಗೌಡ, ತಾಯಿ: ಹುಚ್ಚಮ್ಮ ದೇವಿ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೆರಗನಹಳ್ಳಿ ಅವರ ಹುಟ್ಟೂರು. ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ಅವರ ಶಿಕ್ಷಣ ನಡೆಯಿತು.
ಬಿ.ಎಸ್ಸಿ ಪದವಿ ಪಡೆದು ಪೂನಾದಿಂದ ಎಲ್.ಎಲ್.ಬಿ. ಪದವಿ ಪಡೆದರು. ಸರ್ಕಾರಿ ಸೇವೆಗೆ ಸೇರಿ ನಂತರ ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಪಾಸು ಮಾಡಿ ಅಧಿಕಾರಿಯಾದರು. ೧೯೬೦ರಲ್ಲಿ ಐ.ಎ.ಎಸ್. ಅಧಿಕಾರಿಗಳಾದರು. ಹಲವಾರು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದರು.
ಜಾನಪದ ಸಾಹಿತ್ಯ ಹಾಗೂ ಸಂಸ್ಕೃತಿಗಳಿಗೆ ನೀಡಿದ ಕೊಡುಗೆಗಳಿಗಾಗಿ ಅವರು ಹೆಸರಾಗಿದ್ದಾರೆ. ದೊಡ್ಡಮನೆ, ಸೊನ್ನೆಯಿಂದ ಸೊನ್ನೆಗೆ, ಭೂಮಿಗೆ ಬಂದ ಗಂಧರ್ವ, ನನ್ನೂರು, ಅವರ ಕಾದಂಬರಿಗಳು, ಕಾಫಿಯ ಉಗಮ, ಚರಿತ್ರೆ ಬಗ್ಗೆ ಬೆಟ್ಟದಿಂದ ಬಟ್ಟಲಿಗೆ-ಕೃತಿಗಳನ್ನು ರಚಿಸಿದ್ದಾರೆ. ಏಳು ಸಂಪುಟಗಳಲ್ಲಿ ಹೊರಬಂದಿರುವ ’ಪ್ರವಾಸಿ ಕಂಡ ಇಂಡಿಯಾ’ - ಅನುವಾದ ಕೃತಿ.
ವಿವಿಧ ದೇಶಗಳ ಪ್ರವಾಸಿಗರು ಭಾರತವನ್ನು ಕಂಡು ವರ್ಣಿಸಿದ ರೀತಿಗಳನ್ನೆಲ್ಲ ಕಲೆಹಾಕಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಸೋಬಾನೆ ಚಿಕ್ಕಮ್ಮನ ಪದಗಳು, ಪದವವೆ ನಮ್ಮ ಎದೆಯಲ್ಲಿ, ಕರ್ನಾಟಕ ಜನಪದ ಕಥೆಗಳು, ಹೆಳವರು ಮತ್ತು ಅವರ ಕಾವ್ಯಗಳು, ಕನ್ನಡ ಜಾನಪದ ಕೋಶ - ಇತ್ಯಾದಿ ಅವರ ಜನಪದ ಕೃತಿಗಳು ವೆರಿಯರ್ ಎಲ್ವಿನರ ’ಗಿರಿಜನ ಪ್ರಪಂಚ’ ಕೃತಿ. ಭಾರತಕ್ಕೆ ಬಂದು ಗಾಂಧೀಜಿಯವರಿಂದ ಪ್ರಭಾವಿತರಾಗಿ, ಗಿರಿಜನರ ಅಧ್ಯಯನದಲ್ಲಿ, ತಮ್ಮನ್ನು ತೊಡಗಿಸಿಕೊಂಡ ಎಲ್ವಿನರ ಕಥೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ, ನಾಟಕ ಅಕಾಡೆಮಿಯ ಫೆಲೋಶಿಪ್‍ಗಳು ಅವರಿಗೆ ಸಂದಿವೆ. ಬೆಂಗಳೂರು ಜಿಲ್ಲೆಯ ರಾಮನಗರದ ಬಳಿ ಜಾನಪದ ಲೋಕವನ್ನು ಸ್ಥಾಪಿಸಿದ್ದಾರೆ. ಮುಧೋಳದಲ್ಲಿ ೧೯೯೫ರಲ್ಲಿ ನಡೆದ ೬೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ
|