Log In | Join Now
Dinakara Desai Print
Written by MS Rajanikanth   

dinakara_desai.jpg"ದಿನಕರ ದೇಸಾಯಿ" - (೧೯೦೯-೧೯೮೨)
ದಿನಕರ ದೇಸಾಯಿ ಅವರು ಜನಿಸಿದ್ದು ೧೯೦೯ರ ಸೆಪ್ಟೆಂಬರ್ ೧೦ರಂದು; ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ. ತಂದೆಯ ಹೆಸರು: ದತ್ತಾತ್ರೇಯ, ತಾಯಿ: ಅಂಬಿಕಾ. ತಂದೆ ಪ್ರಾಥಮಿಕ ಶಾಲಾ ಶಿಕ್ಷಕರು. ಅಂಕೋಲೆ ಕಾರವಾರ ಹಾಗೂ ಬೆಂಗಳೂರುಗಳಲ್ಲಿ ಅವರ ವಿದ್ಯಾಭ್ಯಾಸ ಸಾಗಿತು. ಮೈಸೂರಿನ ಮಹಾರಾಜಾ ಕಾಲೇಜಿನಿಂದ ಬಿ.ಎ. ಹಾಗೂ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ; ಮರುವರ್ಷ ಕಾನೂನು ಪದವಿ ಗಳಿಸಿದರು.

ದಿನಕರ ದೇಸಾಯಿ ಅವರಿಗೆ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ಜಯ ಕರ್ನಾಟಕ ಪತ್ರಿಕೆಯಲ್ಲಿ ಕವನಗಳನ್ನು ಬರೆಯುತ್ತಿದ್ದರು. ಸಂಯುಕ್ತ ಕರ್ನಾಟಕದಲ್ಲಿ ಲೇಖನಗಳನ್ನು ಪ್ರಕಟಿಸಿದರು. ಕಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿ ದುಡಿದರು. ೧೯೪೮ರಿಂದ ೬೨ರವರೆಗೆ ಮುಂಬೈ ನಗರಪಾಲಿಕೆ ಸದಸ್ಯರಾಗಿದ್ದರು. ೧೯೬೭ರಲ್ಲಿ ಲೋಕ ಸಭಾ ಸದಸ್ಯರಾಗಿ ಆಯ್ಕೆಗೊಂಡರು. ಉತ್ತರ ಕನ್ನಡದಲ್ಲಿ ರೈತರ ಸಂಘಟನೆ ಮಾಡಿದರು. ೧೯೫೩ರಲ್ಲಿ ಅಂಕೋಲೆಯಲ್ಲಿ ಕೆನರಾ ವೆಲ್‍ಫೇರ್ ಟ್ರಸ್ಟ್ ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದರು.
    ಅವರ ಮೊದಲ ಕೃತಿ ಬಿಡಿ ಕವನಗಳನ್ನೆಲ್ಲಾ ಸೇರಿಸಿ ಪ್ರಕಟಿಸಿದ ಕವನ ಸಂಗ್ರಹ. (೧೯೫೦) ಮಕ್ಕಳ ಗೀತೆಗಳು, ಮಕ್ಕಳ ಪದ್ಯಗಳು, ಹೂಗೊಂಚಲು, ೧೯೮೩ರಲ್ಲಿ ಹೊರಬಂದ ಚೌಪದಿ ಸಂಗ್ರಹ ಇತ್ಯಾದಿ ಅವರ ಕೃತಿಗಳು. ಪ್ರವಾಸ ಕಥನದ ಹೆಸರು: ನಾ ಕಂಡ ಪಡುವಣ. ಇಂಗ್ಲೀಷ್‍ನಲ್ಲಿ ಮೂರು ಕೃತಿಗಳನ್ನು ರಚಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅವರ ಕೊಡುಗೆ ಗಣನೀಯ. ’ಜನಸೇವಕ’ ಪತ್ರಿಕೆಯನ್ನು ಸ್ಥಾಪಿಸಿ ನಡೆಸಿದರು. ಅವರಿಗೆ ಅಪಾರ ಜನಪ್ರಿಯತೆಯನ್ನು ತಂದಿತ್ತದ್ದು ಚುಟುಕಗಳು. ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಚೌಪದಿಗಳು ಪ್ರಕಟವಾಗಿ ಓದುಗರ ಗಮನ ಸೆಳೆಯುತ್ತಿದ್ದವು. ಸಮಕಾಲೀನ, ವ್ಯಂಗ್ಯ ಮಿಶ್ರಿತ ಚುಟುಕಗಳು ಜನರ ಮನಸ್ಸಿನಲ್ಲಿ ನೆಲೆಸುತ್ತಿದ್ದವು. ಯೂರೋಪು ದೇಶಗಳಲ್ಲಿ ವಿಶೇಶ ಪ್ರವಾಸ ಮಾಡಿ ಅಲ್ಲಿನ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿದ್ದರು. ವ್ಯಥೆ ತುಂಬಿದ ದನಿ, ಸಾಮಾಜಿಕ ಕಳಕಳಿಯನ್ನು ಅವರ ಚುಟುಕಗಳಲ್ಲಿ ಕಾಣಬಹುದು. ದಿನಕರನ ಚೌಪದಿ ಕೃತಿಗೆ ೧೯೭೮ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ದಿನಕರ ದೇಸಾಯಿ ಅವರು ನಿಧನ ಹೊಂದಿದ್ದು ೧೯೮೨ರ ನವೆಂಬರ್ ೭ರಂದು.

 

ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ 


Books by this Author:

No books found. You can request a book here.
Comments (0) >>
Write comment

busy