|
Written by MS Rajanikanth
|
|
"ಸಿ.ಕೆ. ವೆಂಕಟರಾಮಯ್ಯ" - (೧೮೯೬-೧೯೭೩)
ಸಿ.ಕೆ. ವೆಂಕಟರಾಮಯ್ಯನವರು ಜನಿಸಿದ್ದು ೧೮೯೬ರ ಡಿಸೆಂಬರ್ ೧೦ರಂದು; ಬೆಂಗಳೂರು ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಪೊಟ್ಳು ಗ್ರಾಮದಲ್ಲಿ. ತಂದೆ ಕೃಷ್ಣಪ್ಪ, ತಾಯಿ ನಂಜಮ್ಮ. ವೆಂಕಟರಾಮಯ್ಯನವರ ವಿದ್ಯಾಭ್ಯಾಸ ಕೂಲಿಮಠದಲ್ಲಿ ನಡೆಯಿತು. ಕುಂದೂರು, ಮಾಗಡಿಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಚನ್ನಪಟ್ಟಣದಲ್ಲಿ ಪ್ರೌಢಶಿಕ್ಷಣ ಪರೀಕ್ಷೆ ಪಾಸು ಮಾಡಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು, ನಂತರ ಮುಂಬೈಗೆ ತೆರಳಿ ಅಲ್ಲಿ ಕನ್ನಡ ಎಂ.ಎ. ಹಾಗೂ ಎಲ್.ಎಲ್.ಬಿ. ಪದವಿ ಗಳಿಸಿದರು.
ಶ್ರೀರಂಗಪಟ್ಟಣದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ೧೯೨೪ರಲ್ಲಿ ಮೈಸೂರು ಸರ್ಕಾರದ ಮುಖ್ಯ ಭಾಷಾಂತರಕಾರರಾಗಿ ನೇಮಕಗೊಂಡು, ನಂತರ ಕನ್ನಡ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ಮೊದಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಉತ್ತಮ ವಿದ್ವಾಂಸರು ಹಾಗೂ ವಾಗ್ಮಿಗಳಾಗಿದ್ದ ವೆಂಕಟರಾಮಯ್ಯನವರು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದರು.
ಕನ್ನಡ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಅವರಿಗೆ ಅಗಾಧ ಪಾಂಡಿತ್ಯವಿತ್ತು. ತುರಾಯಿ ಮತ್ತು ಹಳ್ಳಿಯ ಕಥೆಗಳು- ಕಥಾ ಸಂಕಲನಗಳಾದರೆ, ಭಾಸ ಮತ್ತು ಕಾಳಿದಾಸ - ವಿಮರ್ಶಾ ಗ್ರಂಥಗಳು. ಬುದ್ಧ, ಪೈಗಂಬರ್, ಹರ್ಶವರ್ಧನ, ಲಿಂಕನ್, ಆಳಿದ ಮಹಾಸ್ವಾಮಿಯವರು -ಜೀವನ ಚರಿತ್ರೆಗಳು, ಸುಂದರಿ, ಮಂಡೋದರಿ, ಬ್ರಹ್ಮವಾದಿ, ನಚಿಕೇತ, ನಮ್ಮ ಸಮಾಜ - ನಾಟಕ ಕೃತಿಗಳು.
೧೯೪೭ರಲ್ಲಿ ಹರಪನಹಳ್ಳಿಯಲ್ಲಿ ಜರುಗಿದ ೩೦ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ೧೯೫೧ರಲ್ಲಿ ಮೈಸೂರು ಮಹಾರಾಜರಿಂದ ರಾಜಸೇವಾಸಕ್ತ ಬಿರುದು, ೧೯೬೨ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ೧೯೭೧ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅವರಿಗೆ ಸಂದಿತು.
೧೯೩೦ರಿಂದ ೩೭ರ ವರೆಗೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದರು. ನಂತರ ಎರಡನೆ ಬಾರಿಗೆ ೧೯೩೮ರಿಂದ ೪೦ರ ವರೆಗೆ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು. ಅವರು ನಿಧನ ಹೊಂದಿದ್ದು ೧೯೭೩ರ ಏಪ್ರಿಲ್ ೩ರಂದು.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ
|