|
"ಭಾರತೀಪ್ರಿಯ" - (೧೯೧೧-೧೯೮೧)
ನಂಜನಗೂಡು ಶ್ರೀನಿವಾಸರಾವ್ ವೆಂಕಟರಾವ್ ಜನಿಸಿದ್ದು ೧೯೧೧ರಂದು. ಅವರು ಭಾರತೀಪ್ರಿಯ ಎಂದೇ ಪ್ರಸಿದ್ಧರಾಗಿದ್ದರು. ತಂದೆ: ಶ್ರೀನಿವಾಸರಾವ್, ತಾಯಿ: ಸುಬ್ಬಮ್ಮ. ತಂದೆಯವರು ಸರ್ಕಾರಿ ಉದ್ಯೋಗದಲ್ಲಿದ್ದರು.
ಮೈಸೂರಿನ ಮಹಾರಾಜಾ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಪತ್ನಿ: ಅನಸೂಯ. ಅವರು ಬೆಂಗಳೂರಿನಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.
ಜನವಾಣಿ, ಮಾತೃಭೂಮಿ, ಪೌರವಾಣಿ, ದೇಶಬಂಧು, ತಾಯಿನಾಡು, ಸಂಯುಕ್ತ ಕರ್ನಾಟಕ, ಕೈಲಾಸ, ಉತ್ಥಾನ - ಹೀಗೆ ಹಲವಾರು ಪತ್ರಿಕೆಗಳಲ್ಲಿ ಅವರು ದುಡಿದರು. ಪತ್ರಿಕೆಯ ಕೆಲಸದ ಜೊತೆಗೆ ಸಾಹಿತ್ಯದ ಬಗೆಗೆ ಅವರಿಗೆ ಅಪಾರ ಒಲವು. ಕಥೆ, ಕಾದಂಬರಿ, ನಾಟಕ, ಸಂಗೀತಗಳಲ್ಲಿ ಆಸಕ್ತಿ.
ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಒಲವು ಹೊಂದಿದ್ದ ಇವರು ಸಾಕಷ್ಟು ಅಧ್ಯಯನವನ್ನೂ ಮಾಡಿದರು. ಕಾದಂಬರಿ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಕೊಡುಗೆ ಅಪಾರ. ರುದ್ರವೀಣೆ - ಕಥಾಸಂಕಲನ. ರಾಗಿಣಿ, ರೂಪಸರ್ಪಿಣಿ, ಚತುರ ಚಾಣಾಕ್ಯ - ಕಾದಂಬರಿಗಳು. ನಿರ್ದೋಷಿಗಳ ಪಲಾಯನ, ಮಂಜಿನ ಮುಸುಕು, ಮಾಗಿ ಬಂದರೆ- ಕಿನ್ನರ ಕಥೆಗಳು, ಕೆನಡಿ ಜೀವನ ಚಿತ್ರ, ಭಾರತೀಯ ಚಿತ್ರಕಲೆ, ಅವರ ಅನುವಾದಿತ ಕೃತಿಗಳು.
ಧ್ರುವತಾರೆಗಳ ಕೃತಿಯಲ್ಲಿ ಪೌರಾಣಿಕ ವ್ಯಕ್ತಿಗಳಾದ ಧ್ರುವ, ಪ್ರಹ್ಲಾದ, ಮಾರ್ಕಂಡೇಯ, ಏಕಲವ್ಯ, ಅಭಿಮನ್ಯು-ಗಳನ್ನು ಕುರಿತಾದ ವ್ಯಕ್ತಿ ಚಿತ್ರಣ ನೀಡಿದ್ದಾರೆ. ಗಾಂಪಗಾಥ-ಹಾಸ್ಯ ಬರಹಗಳ ಸಂಕಲನ. ’ಮೋಚಿ’ ಅವರು ಬರೆದ ಅತ್ಯುತ್ತಮ ಕಥೆಯೆಂದು ಪರಿಗಣಿತವಾಗಿದೆ. ಹಿಂದಿ, ಇಂಗ್ಲೀಷ್, ಭಾರತೀಯ ಭಾಷೆಗಳಿಗೆ ಅದು ಅನುವಾದವಾಗಿದೆ. ರಂಗಭೂಮಿ, ಪತ್ತೆದಾರಿ ಕಾದಂಬರಿಗಳಲ್ಲೂ ಅವರಿಗೆ ಸಾಕಷ್ಟು ಆಸಕ್ತಿ ಇತ್ತು.
ಭಾರತೀಪ್ರಿಯರು ನಿಧನ ಹೊಂದಿದ್ದು ೧೯೮೧ರಲ್ಲಿ.
ಸಂಗ್ರಹ: "ನೂರೊಂದು ಕನ್ನಡ ಕುಲಶ್ರೇಷ್ಠರು" - ಸಾಹಿತ್ಯ ಮಾಲಿಕೆ
|