|
Written by M.A.Kodandarama
|
|
ನಾವು ಇದೀಗ ಸುವರ್ಣ ಕರ್ನಾಟಕ ವರ್ಷವನ್ನಾಚರಿಸುತ್ತಿರುವುದು ಸರಿಯಷ್ಟೆ. ನಮ್ಮ ಪೂರ್ವಜರು ಕನ್ನಡದ ಜನ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಕಂಡ ಕನಸು ಮೂರ್ತ ರೂಪ ತಳೆಯುತ್ತಿದೆಯದರೂ ಇನ್ನೂ ಬಹಳಷ್ಟು ಕೆಲಸಗಳು ಈನಿಟ್ಟಿನಲ್ಲಿ ನಡೆಯಬೇಕಿವೆ. ಇಂದು ನಾವೆಲ್ಲರೂ ಕಳೆದ ೫೦ ವರ್ಷಗಳಿಂದ ಕನ್ನಡದ ಹಾದಿಯಲ್ಲಿ ನಡೆದ ಉತ್ತಮ ಕಾರ್ಯಗಳನ್ನು ಗುರುತಿಸಿ, ಅದಕ್ಕೆ ಕಾರಣಕರ್ತರಾದ ಮಹನೀಯರನ್ನು ಸ್ಮರಿಸಬೇಕಿದೆ. ಅದೇರೀತಿ, ಈಹಿಂದೆ ಮಾಡಿದ ತಪ್ಪುಗಳನ್ನು ಗುರುತಿಸಿ, ಇನ್ನೂ ನನಸಾಗದ ವಿಷಯಗಳ ಅವಲೋಕನ ಮಾಡಿ, ಬರುವ ವರ್ಷಗಳಲ್ಲಿ ಕನ್ನಡದ ಏಳ್ಗೆಗಾಗಿ ಏನೇನು ಕೆಲಸ ನಡೆಯಬೇಕೋ ಅದನ್ನು ಗುರುತಿಸಿ, ಅದರಲ್ಲಿ ಶ್ರಧ್ಧಾಪೂರ್ವಕವಾಗಿ ನಮ್ಮನ್ನು ತೊಡಗಿಸಿಕೊಳ್ಳಬೇಕಾದುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ.
ಕನ್ನಡ ಸಾಹಿತ್ಯ ಲೋಕಕ್ಕೊಂದು ನಮ್ಮ ಕಿರುಕಾಣಿಕೆ
ಇಂದು ಸುಮಾರು ಐದು ಕೋಟಿಗೂ ಹೆಚ್ಚು ಇರುವ ಕನ್ನಡಿಗರು ಕರ್ನಾಟಕದಲ್ಲಲ್ಲದೆ ದೇಶದ ಹಾಗೂ ವಿದೇಶಗಳ ಅನೇಕ ಭಾಗಗಳಲ್ಲಿ ಹಂಚಿಹೋಗಿದ್ದಾರೆ. ಈ ಎಲ್ಲರಿಗೂ ಕನ್ನಡದ ಆಗುಹೋಗುಗಳ ಬಗ್ಗೆ ತಿಳಿಯುವ, ಅದರ ಏಳ್ಗೆಗಾಗಿ ಶ್ರಮಿಸುವ ಹಕ್ಕು ಇದೆ. ಅಂತರ್ಜಾಲದ ಈ ಯುಗದಲ್ಲಿ ದೂರದ ಗಣನೆ ಅಮುಖ್ಯ. ಎಲ್ಲಾದರೂ ಇರು, ಸುಖಶಾಂತಿಯಿಂದಿರು, ಕನ್ನಡದ ಬಗ್ಗೆ ಕಾಳಜಿ ಹೊಂದಿರು ಎಂದು ಆಶಿಸುವುದು ತಪ್ಪಾಗಲಾರದಲ್ಲವೇ?
ಸುವರ್ಣ ಕರ್ನಾಟಕದ ಈ ಸಂದರ್ಭದಲ್ಲಿ ನಾವೂಕೂಡ ಏನಾದರೊಂದು ಉತ್ತಮ ಕಾರ್ಯವನ್ನು ಮಾಡುವ ಅಭಿಲಾಶೆಯಿಂದ ನಮ್ಮ ಆಪ್ತರೊಂದಿಗೆ ಸಮಾಲೋಚಿಸಿದುದರ ಫಲವೇ ಈ ನಮ್ಮ ಹಾಗೂ ನಿಮ್ಮ ಯೂಲೂಪ್ ಸಂಸ್ಥೆ. ಕನ್ನಡಿಗರೆಲ್ಲೇ ಇರಲಿ, ಕನ್ನಡ ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದಂತಹ ವಿಷಯಗಳ ಬಗ್ಗೆ ತಿಳಿಯಲು, ತಿಳಿಸಲು ಮತ್ತು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅಂತರ್ಜಾಲದ ಮೂಲಕ ಒಂದು ವ್ಯವಸ್ಥೆ ಕಲ್ಪಿಸುವುದು ನಮ್ಮ ಗುರಿ. ಅದೇ ರೀತಿ, ಕನ್ನಡ ಸಾಹಿತ್ಯದ ಸರ್ವತೋಮುಖ ಬೆಳವಣಿಗೆಗಾಗಿ ಕನ್ನಡಿಗರು ಸದಾಕಾಲ ಚಿಂತನೆ ನಡೆಸುತ್ತಿರಬೇಕು, ಸಾಹಿತಿಗಳ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ತಿಳಿದುಕೊಳ್ಳಬೇಕು, ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬುದೇ ನಮ್ಮ ಆಶಯ. ಈ ನಿಟ್ಟಿನಲ್ಲಿ ಈ ನಮ್ಮ ವೆಬ್-ಸೈಟ್ ಕನ್ನಡಿಗರ ಪ್ರಪಂಚಕ್ಕೊಂದು ಕಿರುಕಾಣಿಕೆಯಾಗಿ ಹೊರಹೊಮ್ಮುತ್ತಿದೆ.
ಕನ್ನಡ ಸಾಹಿತ್ಯ ಬೆಳೆಯಬೇಕಾದರೆ ಜನರು ಕನ್ನಡ ಪುಸ್ತಕಗಳ ಬಗ್ಗೆ ಆಸಕ್ತಿ ತೋರಿಸುವುದು, ಅವುಗಳನ್ನು ಕೊಂಡು ಓದುವುದು ಬಹಳ ಮುಖ್ಯ. ಪ್ರಪಂಚದ ಯಾವುದೇಮೂಲೆಯಲ್ಲಿರುವ ಕನ್ನಡಿಗರಿಗೆ, ಕನ್ನಡಪುಸ್ತಕಪ್ರಿಯರಿಗೆ ನೂತನ ಹಾಗೂ ಅವರಿಗಿಷ್ಟ್ವಾದ ಕನ್ನಡ ಪುಸ್ತಕಗಳನ್ನು ತಲುಪಿಸುವ ಕಾರ್ಯವನ್ನೂ ಕೂಡಾ ಈ ನಮ್ಮ ಸಂಸ್ಥೆ ಮಾಡಲು ಮುಂದಾಗಿದೆ. ಇದಕ್ಕೆ ಓದುಗರೆಲ್ಲರ ಹಾಗೂ ಕನ್ನಡಿಗರೆಲ್ಲರ ಸಹಕಾರ ಬಹಳ ಮುಖ್ಯ. ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ಐಬಿಎಚ್ ಪ್ರಕಾಶನದ ಹಾಗೂ ಅದರ ಮಾಲೀಕರಾದ ಶ್ರೀಯುತ ಲಕ್ಷ್ಮೀನಾರಾಯಣ ಅಡಿಗರ ಪಾತ್ರ ಬಹಳ ಮಹತ್ವದ್ದಾಗಿದೆ. ಅವರಿಗೆ ನಮ್ಮ ಕೃತಜ್ಞತೆಗಳು. ನಿಮ್ಮೆಲ್ಲರ ಅಭಿಮಾನದಿಂದ, ಆಶೀರ್ವಾದದಿಂದ ನಾವು ಚಿರಂತರ ಕನ್ನಡದ ಏಳ್ಗೆಗಾಗಿ ಶ್ರಮಿಸುವಂತಾಗಲಿ ಎಂಬುದೇ ನಮ್ಮ ಆಶಯ.
"ಜಯಕರ್ನಾಟಕ ಜಯಕರ್ನಾಟಕ, ಜಯಕರ್ನಾಟಕ ಮಾತೆ,
ಜಯಗೀತೆ ಹಾಡಿ ಸುತರೆಲ್ಲ ಕೂಡಿ ವಂದಿಪೆವು ಜನ್ಮದಾತೆ...."
ಕನ್ನಡಿಗರೆಲ್ಲರ ತನು, ಮನ ಹಾಗೂ ಕಾರ್ಯಗಳಲ್ಲಿ ಸದಾಕಾಲ ಕನ್ನಡಗೀತೆ ಮೊಳಗುತ್ತಿರಲಿ.
ಮೃಗವಧೆ ಕೋದಂಡರಾಮ.
|