|
ನಾಡು - ನುಡಿಯ ಬೆಳವಣಿಗೆಯಲ್ಲಿ ಪುಸ್ತಕಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಪುಸ್ತಕಗಳು ನಮ್ಮ ಸಹಪಾಠಿಗಳು, ಸಂಗಾತಿಗಳು. ಪುಸ್ತಕ ಸಂಸ್ಕೃತಿಗಿಂತ ಮಿಗಿಲಾದದ್ದು ಬೇರೊಂದಿಲ್ಲ ಆದ್ದರಿಂದ ಪುಸ್ತಕ ಓದುವ ಹವ್ಯಾಸ ಒಳ್ಳೆಯ ಬೆಳವಣಿಗೆಗೆ ಕಾರಣವಾಗುತ್ತದೆ. ಇದರಿಂದ ಉತ್ತಮ ಸಂಸ್ಕೃತಿಗೆ ನಾಂದಿ . ನಾಳಿನ ಅಭಿವೃದ್ಧಿಯ ಪ್ರೇರಕ.
ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ, ಅಂದ ಹಾಗೆ ಮನೆಯಲ್ಲಿ ದೊಡ್ಡವರಾದವರು ಈ ಹವ್ಯಾಸವನ್ನು ರೂಢಿಸಿಕೊಂಡರೆ ಮಿಕ್ಕವರೆಲ್ಲ ಅದೇ ಬೆಳವಣಿಗೆಯಲ್ಲಿ ಮುಂದುವರಿಯುವುದು ಸಹಜ. ನಾಳಿನ ಸಮಾಜದ ಅಭಿವೃದ್ಧಿಯಲ್ಲಿ ಇದರ ಪಾತ್ರ ಬಹುಮುಖ್ಯ.
ಹಿಂದೆ ಪುಸ್ತಕಗಳ ಅಂದ ಹೇಗಿತ್ತೆಂದರೆ, ಪುಸ್ತಕಗಳನ್ನು ಮುಟ್ಟಿದ ಮೇಲೆ ಕೈತೊಳೆದುಕೊಳ್ಳಬೇಕಿತ್ತು. ಆದರೆ ಈಗ ಅದು ಬದಲಾಗಿದೆ. ಈಗಿನ ಕಾಲದಲ್ಲಿ ಹೇಳುವುದಾದರೆ ಪುಸ್ತಕಗಳನ್ನು ಮುಟ್ಟುವ ಮುನ್ನ ಕೈತೊಳೆದು ಮುಟ್ಟಬೇಕು. ಅಂದರೆ ಅಷ್ಟರ ಮಟ್ಟಿಗೆ ಮುದ್ರಣ ತಂತ್ರಜ್ಞಾನ ಬೆಳೆದಿದೆ. ಇದರಿಂದ ಪುಸ್ತಕಗಳ ಮಾರಾಟ ಹೆಚ್ಚಾಗುತ್ತದೆ ಎಂಬುದು ಸತ್ಯಕ್ಕೆ ಹತ್ತಿರವಾದ ಮಾತು. ಕಾರಣ ಇಷ್ಟೇ ಪುಸ್ತಕ ಆಕರ್ಷಕವಾದ ಮುಖಪುಟದೊಂದಿಗೆ ಒಳ್ಳೆಯ ಕಾಗದ ಬಳಕೆಯಿಂದ ಮುದ್ರಣವಾಗಿದ್ದರೆ ಅದನ್ನು ಓದುಗ ಕೈಗೆತ್ತಿಕೊಳ್ಳುತ್ತಾನೆ. ಹೀಗೆ ಕೈಗೆತ್ತಿಕೊಂಡರೆ ಆ ಪುಸ್ತಕ ಅರ್ಧ ಸೇಲ್ ಆದ ಹಾಗೆ. ಉಳಿದರ್ಧ ಅದರ ಒಳಗಿನ ಹೂರಣವನ್ನು ಒಳಗೊಂಡಿರುತ್ತದೆ. ಇದು ಪುಸ್ತಕ ಪ್ರಕಾಶಕರು ಮಾರಾಟದ ವ್ಯವಸ್ಥೆಯನ್ನು ಉತ್ತಮಗೊಳಿಸಲು ಕೈಗೊಳ್ಳಬೇಕಾದ ಕ್ರಮ ಮತ್ತು ಗಮನಿಸಬೇಕಾದ ಅತಿ ಮುಖ್ಯ ಅಂಶ.
ಪುಸ್ತಕ ಮಾರುಕಟ್ಟೆಗೆ ಬಂದ ಬಗ್ಗೆ ಮಾಹಿತಿ ಓದುಗರಿಗೆ ತಲುಪಬೇಕಾಗಿರುವುದು ಬಹುದೊಡ್ಡ ವಿಚಾರ. ಇದರ ಅಗತ್ಯತೆಗಾಗಿ ಪತ್ರಿಕೆಗಳಿಗೆ ಕೊಡುವುದು, ಅದರ ಬಗ್ಗೆ ವಿಮರ್ಶೆ ಅಥವಾ ಪರಿಚಯ ಬರುವ ಹಾಗೆ ಮಾಡುವುದು ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಮಾದರಿ ಪ್ರತಿಗಳೊಂದಿಗೆ ಪುಸ್ತಕ ವಿತರಕರನ್ನು ಸಂಪರ್ಕಿಸಿ ಅವರ ಮೂಲಕ ಪುಸ್ತಕಗಳು ಓದುಗರಿಗೆ ಸಕಾಲಕ್ಕೆ ತಲುಪುವಂತೆ ಮಾಡುವುದು. ಅಲ್ಲದೆ ಸಿದ್ಧವಾದ ಪುಸ್ತಕಗಳಲ್ಲಿ ಎಲ್ಲವನ್ನಲ್ಲದಿದ್ದರೂ ಕೆಲವನ್ನಾದರೂ ಬಿಡುಗಡೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ದಿನದಂದು ಅವನ್ನು ರಿಯಾಯಿತಿ ದರದಲ್ಲಿ ಓದುಗರಿಗೆ ಪೂರೈಸುವುದು ಹಾಗೂ ಪತ್ರಿಕೆಗಳಲ್ಲಿ ಆ ಪುಸ್ತಕದ ಬಗ್ಗೆ ಮಾಹಿತಿ ಬರುವಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು. ಅಲ್ಲದೆ ಓದುಗರಿಗೆ ಅಗತ್ಯವಾದ ಪುಸ್ತಕಗಳನ್ನು ಪ್ರಕಟಿಸುವುದು ಬಹು ಮುಖ್ಯ ವಿಚಾರ.
ಟಿ.ವಿ. ಬಂದ ಮೇಲೆ ಓದುವ ಅಭಿರುಚಿ ಕಡಿಮೆ ಎನ್ನುವುದು ತಪ್ಪು. ನಿಜವಾಗಿಯೂ ಹೇಳಬೇಕಾದರೆ ಪುಸ್ತಕ ಓದಿದಾಗ ಸಿಗುವ ತೃಪ್ತಿ ಟಿ.ವಿ. ನೋಡಿದಾಗ ಸಿಗುವುದಿಲ್ಲ. ಅದು ಕಾಲ್ಪನಿಕ. ಆದರೆ ಇದು ಅರಗಿಸಿಕೊಳ್ಳಬಹುದಾದ ಸತ್ವಭರಿತ ಆಹಾರ. ಹಾಗಾಗಿ ಓದು ಒಳ್ಳೆಯ ಹವ್ಯಾಸ. ನೀವೂ ಓದಿ ಬೇರೆಯವರನ್ನೂ ಓದುವಂತೆ ಪ್ರೇರೇಪಿಸಿ.
ಬೆಲೆ ನಿರ್ಣಯ:
ಎಲ್ಲರಿಗೂ ಓದುವ ಹಂಬಲವಿದೆ. ಆದರೆ ಕೆಲವೊಮ್ಮೆ ತನಗೆ ಬೇಕಾದ ಪುಸ್ತಕವನ್ನು ಕೊಂಡುಕೊಳ್ಳಲು ನಿರ್ಧರಿಸಿ ಪುಸ್ತಕದಂಗಡಿಗೆ ಹೋದಾಗ ಅದರ ಬೆಲೆಯನ್ನು ನೋಡಿ ಬೇಸರದಿಂದ ಹೊರನಡೆಯುವ ಪ್ರಸಂಗವೂ ಇದೆ. ಕಾರಣ ಇಷ್ಟೇ. ಪ್ರಕಾಶಕರಾದವರು ಓದುಗರಿಗೆ ಬೇಕಾದ ಪುಸ್ತಕಗಳನ್ನು ಪ್ರಕಟಿಸುವ ಜೊತೆಗೆ ಅವುಗಳನ್ನು ಪುಸ್ತಕ ಪ್ರಿಯರಿಗೆ ತಲುಪಿಸುವಾಗಲೂ ಅಷ್ಟೇ ಜಾಗ್ರತೆಯಿಂದ ಬೆಲೆ ನಿಗದಿಗೊಳಿಸಬೇಕಾಗುತ್ತದೆ. ಇದೇ ನಾವು ಅಂದರೆ ಪ್ರಕಾಶಕರಾದವರು ಓದುಗರಿಗೆ ನೀಡುವ ಉತ್ತೇಜನ. ಕನ್ನಡ ಪುಸ್ತಕೋದ್ಯಮದ ಬೆಳವಣಿಗೆಗೆ ಕೊಡುವ ಕೊಡುಗೆ.
ಮಾಧ್ಯಮಗಳ ಮೂಲಕ ಪ್ರಚಾರ:
ಆಗತಾನೆ ಬಂದಂತಹ ಹೊಸ ಪುಸ್ತಕಗಳನ್ನು ಮಾಧ್ಯಮಗಳ ಮೂಲಕ ಅಂದರೆ ಆಕಾಶವಾಣಿ, ದೂರದರ್ಶನ ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ಪ್ರಚಾರ ಬರುವಂತೆ ಏರ್ಪಾಡು ಮಾಡುವುದು. ಹಾಗೆಯೇ ದೂರದರ್ಶನ ಹಾಗೂ ಇನ್ನೀತರ ಟಿ.ವಿ. ಚಾನಲ್‍ಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮಗಳನ್ನು ಪುಸ್ತಕಕ್ಕೆ ಸಂಬಂಧಿಸಿದಂತಹ ಪ್ರಶ್ನೆಗಳೊಂದಿಗೆ ಏರ್ಪಡಿಸುವುದು. ಅಲ್ಲದೆ ಅಂತಹ ಕಾರ್ಯಕ್ರಮಗಳಲ್ಲಿ ಗೆದ್ದವರಿಗೆ ಬಹುಮಾನವಾಗಿ ಪುಸ್ತಕಗಳನ್ನೆ ಉಡುಗೊರೆಯಾಗಿ ಕೊಡುವುದು. ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮಗಳಲ್ಲಿ ಪುಸ್ತಕಗಳ ಮಹತ್ವವನ್ನು ಕುರಿತು ಚರ್ಚಿಸುವುದು, ಹೀಗೆ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಮಾಧ್ಯಮಗಳ ಮೂಲಕವೂ ಪ್ರಚಾರ ಗಿಟ್ಟಿಸಿಕೊಂಡಲ್ಲಿ ಪುಸ್ತಕೋದ್ಯಮದ ಅಭಿವೃದ್ಧಿಗೆ ಸಹಕಾರಿಯಾಗಬಲ್ಲದು.
ಗ್ರಂಥಾಲಯ - ಪ್ರಕಾಶಕ - ಓದುಗ:
ಇದೊಂದು ಆಶ್ಚರ್ಯಕರ ಸಂಗತಿ, ಜೊತೆಗೆ ಅವಮಾನದ ಸಂಗತಿ ಕೂಡ. ಕಾರಣ ಕೆಲವು ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯಗಳಿಗೆ ಮಾತ್ರ ಮೀಸಲಾಗಿ ಪುಸ್ತಕಗಳನ್ನು ಪ್ರಕಟಿಸಿ ಗ್ರಂಥಾಲಯಗಳ ಮೊರೆ ಹೊಕ್ಕು ಅವುಗಳನ್ನು ಅಲ್ಲಿಗೆ ಸಾಗಿಸುವಲ್ಲಿ ಮಾತ್ರ ನಿರತರು. ಸದರಿ ಪ್ರಕಾಶಕರಿಗೆ ಮಾರುಕಟ್ಟೆಯ ಅವಶ್ಯಕತೆ ಬೇಕಾಗಿಲ್ಲ ಹಾಗಾಗಬಾರದು. ಯಾವುದೇ ಪ್ರಕಾಶಕರು ಪ್ರಕಟಿಸಿದ ಪುಸ್ತಕಗಳಾಗಲಿ ಅವು ಪ್ರಚಾರವಾಗಬೇಕಾದರೆ ಪುಸ್ತಕದಂಗಡಿ ತಲುಪಬೇಕು. ಸಾಹಿತ್ಯ ಸಮ್ಮೇಳನ, ಪುಸ್ತಕ ಮೇಳ ಇನ್ನೀತರ ಪುಸ್ತಕ ಪ್ರದರ್ಶನಗಳಲ್ಲಿ ಇಟ್ಟು ಪ್ರದರ್ಶಿಸಿದಾಗಲೇ ಓದುಗರಿಗೆ ಆ ಪುಸ್ತಕದ ಬಗ್ಗೆ ಮಾಹಿತಿ ತಿಳಿಯುವುದು. ಎಲ್ಲಾ ಓದುಗರು ಗ್ರಂಥಾಲಯವನ್ನು ಅವಲಂಭಿಸಲು ಸಾಧ್ಯವಾಗುವುದಿಲ್ಲ. ಸಮಯದ ಅಭಾವದಿಂದಲೋ ಅಥವಾ ಕಾರ್ಯ ಒತ್ತಡದಿಂದಲೋ ಅದು ಸಾಧ್ಯವಾಗದಿರಬಹುದು. ಇದೇ ಗ್ರಂಥಾಲಯದ ಬಗ್ಗೆ ಇನ್ನೊಂದು ದ್ರ್‍ಅಷ್ಟಿಯಲ್ಲಿ ಹೇಳುವುದಾದರೆ ಕೆಲವೇ ಪ್ರಕಾಶಕರು ಪ್ರಕಟಿಸಿದ ಪುಸ್ತಕಗಳೂ ಮಾತ್ರ ಅಲ್ಲಿ ಲಭ್ಯವಿದ್ದು, ಅವನ್ನು ಓದುಗ ಗಮನಿಸಿದಾಗ ಅವನಿಗೆ ಬೇಕಾದ ಸಾಹಿತಿಯ ಅಥವಾ ಸಾಹಿತ್ಯ ಸಿಗದಿದ್ದ ಪಕ್ಷದಲ್ಲಿ ಅವನು ಗ್ರಂಥಾಲಯದ ಬಗೆಜಗ ವಿಶ್ವಾಸವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಉಂಟಾಗಬಹುದು. ಓದುಗ ಒಂದು ಬಾರಿ ಎಲ್ಲಿಯಾದರೂ ಪುಸ್ತಕವನ್ನು ನೋಡಿದ್ದರೆ ಅದನ್ನು ಇನ್ನೆಲ್ಲಿಯಾದರೂ ಖರೀದಿಸಬಹುದು. ಒಟ್ಟಿನಲ್ಲಿ ಪುಸ್ತಕ ಓದುವ ಗೀಳನ್ನು ಹುರಿದುಂಬಿಸುವುದು ಪ್ರಕಾಶಕರ ಪಾತ್ರವಾಗಬೇಕು. ಅದನ್ನು ಬಿಟ್ಟೂ ಕೇವಲ ಗ್ರಂಥಾಲಯಗಳನ್ನು ಅವಲಂಬಿಸಿರುವ ಪ್ರಕಾಶಕರು ಪ್ರಕಾಶಕರೇ ಅಲ್ಲ. ತಮಿಳು, ಮಲೆಯಾಳಂ ಹಾಗೂ ಇನ್ನಿತರ ಭಾಷೆಗಳಲ್ಲಿ ಪ್ರಕಟವಾದ ಪುಸ್ತಕಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಓದುಗರು ಖರೀದಿಸುತ್ತಾರೆ. ಹಾಗೆಯೇ ಕನ್ನಡದಲ್ಲಿಯೂ ಆಗಬೇಕು. ಪ್ರಕಾಶಕರು ಓದುಗರಿಗೆ ಬೇಕಾದ ಪುಸ್ತಕಗಳನ್ನು ಈಗಿನ ಮಾರುಕಟ್ಟೆಯನ್ನು ಅರಿತು ಸಾಹಿತಿಗಳ ಮೂಲಕ ಅವುಗಳನ್ನು ಸಿದ್ದಪಡಿಸಿ ಪ್ರಕಟಿಸಬೇಕಾಗುತ್ತದೆ. ಇದರಿಂದ ಓದುಗರ ಸಂಖ್ಯೆ ಹೆಚ್ಚುವುದರಲ್ಲಿ ಸಂಶಯವಿಲ್ಲ.
ಸರ್ಕಾರದಿಂದ ಸವಲತ್ತು:
ಪ್ರಕಟಿಸಿದ ಪ್ರತಿ ಪುಸ್ತಕವೂ ಓದುಗರ ಕೈ ಸೇರಬೇಕಾದರೆ ಇಲ್ಲಿ ಸರ್ಕಾರದ ಪಾತ್ರ ಅತಿಮುಖ್ಯ. ಕಾರಣ ಪ್ರಕಾಶಕರಿಗೆ ಕಡಿಮೆ ಬೆಲೆಯಲ್ಲಿ ಮುದ್ರಣ ಕಾಗದವನ್ನು ನೀಡುವುದು ಮತ್ತು ಪ್ರಕಟಿಸಿದಂತಹ ಪುಸ್ತಕಗಳಲ್ಲಿ ಇಂತಿಷ್ಟು ಪ್ರಮಾಣದ ಪ್ರತಿಗಳನ್ನು ನೇರವಾಗಿ ಪ್ರಕಾಶಕರಿಂದ ಖರೀದಿಸಿ ಗ್ರಂಥಾಲಯಗಳಿಗೆ ನೀಡುವುದು. ಇದರಿಂದ ಆಯಾ ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳು ಸುಲಭವಾಗಿ ಓದುಗರಿಗೆ ದೊರೆಯುವಂತಾಗುತ್ತದೆ. ಇದರಿಂದ ಪ್ರಕಾಶಕರಿಗೆ ಅಷ್ಟು ಪ್ರಮಾಣದ ಹೊರೆ ಕಡಿಮೆಯಾಗುತ್ತದೆ. ಹಾಗಾಗಿ ಇನ್ನಷ್ಟು ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲು ಸಹಾಯಕವಾಗುತ್ತದೆ. ಇದರ ಜೊತೆಗೆ ಸರ್ಕಾರದ ಅಂಗಸಂಸ್ಥೆಯಾದ ಪುಸ್ತಕ ಪ್ರಾಧಿಕಾರದ ವತಿಯಿಂದ ಎಲ್ಲಾ ತಾಲೂಕು ಮಟ್ಟಗಳಲ್ಲಿ ಪುಸ್ತಕದಂಗಡಿ ತೆರೆಯಲು ಸಹಾಯಕವಾಗುವುದು. ಹೀಗೆ ಪ್ರಕಾಶಕರು ಪ್ರಕಟಿಸಿದಂತಹ ಪುಸ್ತಕಗಳಿಗೆ ಯಾವುದೇ ರೀತಿಯಿಂದಲೂ ಹೊರೆಯಾಗದಂತೆ ನೋಡಿಕೊಂಡಲ್ಲಿ ಇನ್ನಷ್ಟು ಉತ್ತಮ ಪುಸ್ತಕಗಳೂ ಓದುಗರಿಗೆ ದೊರೆಯುವುದರಲ್ಲಿ ಸಂಶಯವಿಲ್ಲ.
ಸಂಗ್ರಹ: "ಪುಸ್ತಕ" ಸ್ಮರಣೆ, ಕರ್ನಾಟಕ ಕನ್ನಡ ಬರಹಗಾರ ಮತ್ತು ಪ್ರಕಾಶಕರ ಸಂಘ (ರಿ), ಬೆಂಗಳೂರು.
|