| Indina Pustakodyamada Gati |
|
| Written by KP Purnachandra Tejaswi | |
|
ನಮ್ಮ ಅತ್ಯುತ್ತಮ ಲೇಖಕರ ಅತ್ಯುತ್ತಮ ಕೃತಿಗಳು... ಸಹ ವರ್ಷಕ್ಕೆ ಒಂದು ಸಾವಿರ
ಪ್ರತಿಗಳು ಖರ್ಚಾಗದ ಸ್ಥಿತಿಯಲ್ಲಿ ನಾವಿದ್ದೇವೆಂದರೆ ಕನ್ನಡಕ್ಕೆ ಯಾವ್ಯಾವ
ಪ್ರಶಸ್ತಿಗಳು ಬಂದರೆ ಏನು ಪ್ರಯೋಜನ. ಹಾಗೆಂದು ಕನ್ನಡಿಗರನ್ನು ದೂರುವುದು ಖಂಡಿತಾ
ತಪ್ಪು. ಈ ದುಃಸ್ಥಿತಿಗೆ ಮುಖ್ಯವಾಗಿ ಬರಹಗಾರರು, ಸರ್ಕಾರ ಮತ್ತು ಪ್ರಕಾಶಕರು ಈ ಮೂರು
ಜನರೇ ಕಾರಣ. ಏಕೆಂದರೆ ಇವತ್ತು ಒಳ್ಳೆಯ ಪುಸ್ತಕಗಳು ನಿರಾಯಾಸವಾಗಿ ವರ್ಷಕ್ಕೆ ಎರಡು
ಸಾವಿರಕ್ಕೂ ಮಿಕ್ಕಿ ಖರ್ಚಾಗುವ ಕನ್ನಡ ಓದುಗರ ಸಮುದಾಯ ಇದೆ. ಆದರೆ ಬರಹಗಾರ ಇವರನ್ನು
ಮುಟ್ಟುವ ಸಾಧ್ಯತೆಗಳೇ ಇಲ್ಲದಂತೆ ನಾವು ಮಾಡಿದ್ದೇವೆ. ಇವತ್ತು ಕನ್ನಡದಲ್ಲಿ
ಪ್ರಕಟವಾಗುತ್ತಿರುವ ನಾಲ್ಕಾರು ನಿಯತಕಾಲಿಕಗಳು ಬಾಗಿಲು ಮುಚ್ಚಿದರೆ ಕನ್ನಡದ
ಬರಹಗಾರರಿಗೆ ಓದುಗರನ್ನು ಮುಟ್ಟುವ ಎಲ್ಲ ಮಾರ್ಗಗಳು ಬಂದ್ ಆಗುತ್ತವೆ.
ಇದು ನಾವು ವಿವೇಚಿಸುತ್ತಿರುವ ಸಂಕೀರ್ಣ ಸಮಸ್ಯೆಯ ಒಂದು ಮುಖ ಅಷ್ಟೇ, ಬರಹಗಾರರಿಗೆ ಓದುಗರ ಅಭಿರುಚಿಯ ಅರಿವೇ ಇಲ್ಲ. ಅವರಿಗೆ ಮಾರುಕಟ್ಟೆಯ ಫೀಡ್‍ಬ್ಯಾಕ್ ಇಲ್ಲ ಎನ್ನುವುದು. ಹಾಗೆಂದ ಮಾತ್ರಕ್ಕೆ ಬರಹಗಾರರು ಓದುಗರ ಅಭಿರುಚಿಗೆ ತಕ್ಕಂತೆ ಕುಣಿಯಬೇಕೆ ಎಂದು ಅನೇಕರು ಆಕ್ಷೇಪಿಸುತ್ತಾರೆ. ನಾನು ಹಾಗೆ ಹೇಳುತ್ತಿಲ್ಲ. ಸೃಷ್ಟಿಕ್ರಿಯೆ ನಾನು ಮೊದಲೇ ವಿವರಿಸಿರುವಂತೆ ಓದುಗರ ಮತ್ತು ಬರಹಗಾರರ ನಡುವಿನ ಸಂವಾದ, ಸಾಹಿತ್ಯ ಸೃಷ್ಟಿ ಇಬ್ಬರ ಪರಸ್ಪರ ಅರಿವಿನ ಅವತಾರ. ಭಾಷೆ ಒಬ್ಬ ಬರಹಗಾರನಿಗೆ ಆ ಭಾಷೆಯನ್ನು ಮಾತಾಡುವ ಜನಸಮುದಾಯದ ಅರಿವಾಗಿ ಕರಗತವಾಗಬೇಕು ಎಂದಷ್ಟೆ ನನ್ನ ಅಭಿಪ್ರಾಯ. ಇದನ್ನು ತಾಳಕ್ಕೆ ತಕ್ಕಂತೆ ಕುಣಿಯುವುದೆಂದೇ ಹೇಳುವುದಾದರೆ ಯಾವ ಯಾವುದೋ ತಾಳಕ್ಕೆ ತಕ್ಕಂತೆ ಕುಣಿಯುವುದರ ಬದಲು ಈ ತಾಳವೇ ವಾಸಿ ಎಂದೆನ್ನಬಹುದು.
ಎರಡನೆಯ ವರ್ಗ ಎಂದರೆ ಪಠ್ಯಪುಸ್ತಕಗಳನ್ನು ಪ್ರಕಾಶನ ಮಾಡುವ ಖದೀಮರದ್ದು. ಸಾಹಿತ್ಯಿಕ ಮೌಲ್ಯಗಳು ಎನ್ನುವುದು ಇವರಿಗೆ ಗೊತ್ತಿಲ್ಲದ ಶಬ್ದ. ಪಠ್ಯಪುಸ್ತಕಗಳಾಗುವಂಥ ಪುಸ್ತಕಗಳನ್ನು ಮಾತ್ರ ಪ್ರಕಟಿಸಿ ಶಿಕ್ಷಣ ಇಲಾಖೆಯ ಸಿಬ್ಬಂದಿಯನ್ನೂ ಪಠ್ಯಪುಸ್ತಕ ಕಮಿಟಿಯನ್ನೂ ಲಂಚದ ಬಲೆಗೆ ಕೆಡವಿ ಪ್ರತಿವರ್ಷ ಒಬ್ಬೊಬ್ಬರೂ ತಮ್ಮ ಪ್ರಕಟಣೆಯ ಎಂಟು ಹತ್ತು ಪುಸ್ತಕಗಳು ವಿವಿಧ ತರಗತಿಗಳಿಗೆ ಪಠ್ಯವಾಗುವಂತೆ ನೋಡಿಕೊಳ್ಳುತ್ತಾರೆ. ಒಬ್ಬೊಬ್ಬರೂ ಹತ್ತಾರು ಹೆಸರಿನ ಬೇನಾಮಿ ಪ್ರಕಾಶನ ಸಂಸ್ಥೆಗಳನ್ನು ನಡೆಸುತ್ತಾರೆ. ಸಾಧಾರಣವಾಗಿ ಇವರು ಗತಿಸಿದ ಲೇಖಕರ ಅಥವಾ ಹಳೆಗನ್ನಡದ ಸಂಗ್ರಹಗಳನ್ನೇ ಪ್ರಕಟಿಸುವುದು, ಬರಹಗಾರನ ಗೌರವಧನವನ್ನೂ ತಾವೇ ಹೊಡಕೊಳ್ಳಬಹುದು ಎನ್ನುವುದೊಂದೇ ಇದಕ್ಕೆ ಕಾರಣ.
ತಂದೆ-ತಾಯಿಗಳಾಗಲಿ, ಶಾಸಕರಾಗಲಿ, ಸರ್ಕಾರವಾಗಲೀ ಇಂಥ ಭಯಾನಕ ಪರಿಸ್ಥಿತಿಯನ್ನು ಗಣನೆಗೆ ಸಹ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಇದಕ್ಕೆ ಮೂಲ ಕಾರಣ ಈ ಪಠ್ಯಪುಸ್ತಕ ಪ್ರಕಾಶಕರ ದುಷ್ಟಕೂಟ. ಇವರು ದುಡ್ಡಿನ ಬಲದಿಂದ ಇಂದು ಇಲಾಖೆಯ ಅಧಿಕಾರಿಗಳನ್ನು, ಪಠ್ಯಪುಸ್ತಕ ಸಮಿತಿಯವರನ್ನು ತಮ್ಮ ಮರ್ಜಿಗೆ ತಕ್ಕಂತೆ ಬದಲಾಯಿಸುವಷ್ಟು ಬಲಾಢ್ಯರಾಗಿದ್ದಾರೆ. ನಮ್ಮ ಶಾಲೆಗಳ ಪಠ್ಯಪುಸ್ತಕಗಳ ಶೋಚನೀಯ ಸ್ಥಿತಿಗೆ ಇವರೇ ಕಾರಣರು. ಶಾಲೆಯ ಮಕ್ಕಳಿಗೂ ಉತ್ತಮ ಕನ್ನಡ ಸಾಹಿತ್ಯ ಪರಿಚಯವಾಗುವಂತೆ ಮಾಡಿದ್ದಾರೆ. ಸದಾ ಭಿನ್ನಮತೀಯರ ಕಾಟದಲ್ಲಿ ತೊಳಲಾಡುವ ಸರ್ಕಾರಗಳು, ಯಾವುದೇ ಪೂರ್ವಪರಿಶ್ರಮ ಇಲ್ಲದೆ ಒಂದು ಭೂಷಣವಾಗಿ ಹುದ್ದೆಯನ್ನಲಂಕರಿಸುವ ಮಂತ್ರಿಗಳು, ಈ ಸರ್ಕಾರಗಳ ಹಂಗಾಮಿತ್ವವನ್ನರಿತ ಭ್ರಷ್ಟ ಅಧಿಕಾರಿಗಳು ಇವರೆಲ್ಲರಿಂದ ಉಂಟಾಗುವ ಗೊಂದಲದ ಪೂರ್ಣ ಸದುಪಯೋಗ ಈ ಪ್ರಕಾಶಕರು ಪಡಕೊಳ್ಳುತ್ತಿದ್ದಾರೆ.
ಕನ್ನಡಕ್ಕಾಗಿ ಹೋರಾಡುವ ಶ್ರೀ ಚಿದಾನಂದಮೂರ್ತಿಯಂಥವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಇವರೆಲ್ಲರ ಹೋರಾಟದ ಮುಖ್ಯ ಕೊರತೆ ಎಂದರೆ ಹೋರಾಟದ ಫಲವಾಗಿ ಸರ್ಕಾರ ಮಂಜೂರು ಮಾಡಿದ ಹಣ ಸದುಪಯೋಗವಾಗುತ್ತಿದೆಯೇ ಎಂದು ನೋಡಲು ಇವರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರ ಅಂತಿಮ ಫಲ ಸಾಹಿತ್ಯಕ್ಕಾಗಲಿ, ಸಂಸ್ಕೃತಿಗಾಗಲೀ ದೊರಕದೆ ಅಷ್ಟೂ ಢಕಾಯಿತರ ಪಾಲಗುತ್ತಿದೆ. ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಕಾವಲು ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ವಿಶ್ವವಿದ್ಯಾನಿಲಯ, ಕನ್ನಡ ಸಾಹಿತ್ಯ ಅಕಾಡೆಮಿ ಎಷ್ಟೊಂದು ಸಂಸ್ಥೆಗಳಿವೆ. ಇವುಗಳು ಖರ್ಚು ಮಾಡುವ ಹಣಕ್ಕೆ ತಕ್ಕಷ್ಟು ಕನ್ನಡಕ್ಕೆ ಸಹಾಯ ಆಗಿದೆಯೇ? ಇವುಗಳನ್ನು ಈಗಿಂದೀಗಲೇ ಮುಚ್ಚಿದರೆ ಕನ್ನಡಕ್ಕೆ ಏನಾದರೂ ನಷ್ಟ, ತೊಂದರೆ ಉಂಟೆ? ಇವುಗಳ ಅನಿವಾರ್ಯ ವಲ್ಲದ ಕೇವಲ ಅಲಂಕಾರಗಳು ಮಾತ್ರವೇ? ಎಲ್ಲರೂ ಪ್ರಾಮಾಣಿಕವಾಗಿ ಯೋಚಿಸಬೇಕು.
ಎಲ್ಲಕ್ಕಿಂತ, ಈ ಬಗೆಯ ಸರ್ಕಾರಿ ಸಬ್ಸಿಡಿಗಳಿಂದ ಮಿಕ್ಕೆಲ್ಲೆ ರಂಗದಲ್ಲೂ ಆಗುತ್ತಿರುವ ಹಾನಿಯೇ ಪ್ರಕಾಶನ ಕ್ಷೇತ್ರದಲ್ಲೂ ಆಗುತ್ತದೆ. ಪುಸ್ತಕದ ಉತ್ಪಾದನೆ ವೆಚ್ಚ ತಾರಾಮಾರಿ ಏರುತ್ತಿರುವ ಈ ಸಂದರ್ಭದಲ್ಲಿ ಕನಿಷ್ಠ ಇನ್ನೂರೈವತ್ತು ರೂ. ಮಾರುಕಟ್ಟೆ ಬೆಲೆಯಾಗುವ ಪುಸ್ತಕವನ್ನು ಸರ್ಕಾರ ಹದಿನೈದು ರೂಪಾಯಿಗೆ ಮಾರಿದರೆ ಬೇರೆ ನ್ಯಾಯಬದ್ಧ ಬೆಲೆಯಲ್ಲಿ ಮಾರುಕಟ್ಟೆಗೆ ಬರುವ ಪುಸ್ತಕಗಳ ಮತ್ತು ಪ್ರಕಾಶಕರ ಕತೆ ಏನು. ನೂರು ಪೇಜಿನ ಎಕ್ಸರ್‌ಸೈಜ್ ಪುಸ್ತಕದ ಬೆಲೆ ಸಹ ಹತ್ತು ರೂಪಾಯಿಗಳಾಗಿರುವಾಗ ಸರ್ಕಾರದ ದಾಳಾಧೂಳಿ ಧೋರಣೆ ದುಡ್ಡು ಕೊಟ್ಟು ಪುಸ್ತಕ ಕೊಳ್ಳುವ ಓದುಗರ ಮನೋಭಾವವನ್ನೇ ಬದಲಿಸುವುದಿಲ್ಲವೆ. ಯಾವುದೋ ವಿಶೇಷ ಸಂದರ್ಭಕ್ಕೆ ಸರ್ಕಾರ ಒಂದಿಷ್ಟು ಪುಸ್ತಕಗಳನ್ನು ಧರ್ಮಾರ್ಥ ಹಂಚಿದರೂ ನನಗೆ ಬೇಸರವಿಲ್ಲ. ಆದರೆ ಪುಸ್ತಕ ಪ್ರಾಧಿಕಾರದ ಅಧಿಕೃತ ಕೆಲಸವೇ ಇದಾದರೆ ಈ ಸಂಸ್ಥೆ ಕನ್ನಡ ಪ್ರಕಾಶನ ಉದ್ಯಮಕ್ಕೆ ಕುಠಾರಪ್ರಾಯವಾಗುವುದರಲ್ಲಿ ಸಂಶಯವಿಲ್ಲ.
ಇನ್ನು ಸರ್ಕಾರದ ಅನುದಾನಗಳಿಂದ ಸಾಹಿತ್ಯ ಸಂಸ್ಕೃತಿಗೆ ಮಾಡುತ್ತಿರುವ ಸಹಾಯದ ಬಗ್ಗೆ ಯೋಚಿಸಿ. ಅನೇಕ ವೇಳೆ ಸಂಸ್ಕೃತಿ ಮತ್ತು ಸಮಾಜದಲ್ಲಾಗುವ ಅನೇಕ ಕಲಾ ಮಾಧ್ಯಮಗಳು ಮತ್ತು ಸಂಸ್ಥೆಗಳು ತೊಂದರೆಗೆ ಸಿಕ್ಕಿಕೊಳ್ಳುತ್ತವೆ ಎನ್ನುವುದು ಸತ್ಯ. ಅಂಥ ಸಂದರ್ಭಗಳಲ್ಲಿ ಸರ್ಕಾರವಾಗಲೀ, ಕಲಾಭಿಮಾನಿಗಳಾಗಲಿ ಸಹಾಯ ಹಸ್ತ ನೀಡಬೇಕಾಗುತ್ತದೆ. ಆದರೆ ಈ ಅನುದಾನಗಳಿಗೆ ಒಂದು ಕಾಲಮಿತಿ ಇದ್ದು ಇವು ತಾತ್ಕಾಲಿಕವಾಗಿ ಇರಬೇಕೆ ಹೊರತು ಅನುದಾನದ ಮೇಲೆ ಹುಟ್ಟಿ ಬೆಳೆಯುವ ಸಂಸ್ಥೆಗಳನ್ನು ರೂಪಿಸುವುದಾದರೆ ಅದು ಅಪಾಯಕರ. ಪ್ರತಿವರ್ಷ ಸರ್ಕಾರಿ ಅನುದಾನಕ್ಕೆ ಕೈಯೊಡ್ಡಿ ಓಡಾಡುವ ಕಲಾವಿದರ ತಂಡವನ್ನು ರೂಪಿಸಿದಂತಾಗುತ್ತದೆ. ಇವರ ಆತ್ಮಗೌರವವನ್ನೇ ನಾಶಮಾಡಿ ನಾವು ಕಲೆ ಮತ್ತು ಸಂಸ್ಕೃತಿಗಳನ್ನು ಬೆಳೆಸಲು ಸಾಧ್ಯವೇ? ಅದೂ ನಮ್ಮ ರಾಜಕಾರಾಣಿಗಳಲ್ಲಿ ಎಂಥವರಿದ್ದಾರೆಂದರೆ ದುಡ್ಡಿಗಾಗಿ ಸರ್ಕಾರದ ಬಳಿ ಬರುವವರನ್ನು ಭಿಕ್ಷುಕನಂತೆಯೇ ನಡೆಸಿಕೊಳ್ಳುತ್ತಾರೆ. ಸರ್ಕಾರದ ಅನುದಾನ ಹೆಚ್ಚಿದಷ್ಟು ಭಟ್ಟಂಗಿಗಳ ಮತ್ತು ಭಿಕ್ಷುಕರ ನೂಕುನುಗ್ಗಲು ವಿಧಾನಸೌಧದಲ್ಲಿ ಶುರುವಾಗುತ್ತದೆ. ಇವರ ಕಲಾ ಪ್ರದರ್ಶನ ವಿದೇಶಿ ಗಣ್ಯರ ಮನರಂಜನೆಗೆ ಸಂಸ್ಕೃತಿ ಇಲಾಖೆ ತೋರಿಸುವ ಕೋತಿ ಕುಣಿತ, ಕರಡಿ ಕುಣಿತಗಳಾಗಿ ಮಾರ್ಪಡುತ್ತದೆ. ಆದ್ದರಿಂದಲೇ ಸರ್ಕಾರದ ಧನಸಹಾಯ ಯಾವತ್ತೂ ತಾತ್ಕಾಲಿಕವಾಗಿರಬೇಕೇ ಹೊರತು ಅದನ್ನೇ ಆಧಾರ ಮಾಡಿಕೊಂಡ ಕಲೆಯಾಗಲಿ, ಸಂಸ್ಥೆಯಾಗಲಿ ಸರ್ವನಾಶವಾಗುತ್ತದೆ.
ಒಮ್ಮೆ ರಂಗಾಯಣದ ಗೆಳೆಯರ ಆಹ್ವಾನದ ಮೇಲೆ ಅಲ್ಲಿಗೆ ಹೋಗಿದ್ದೆ, ಅಲ್ಲಿ ಮಾತನಾಡುತ್ತಿರುವಾಗ ಅಲ್ಲಿನ ಅನೇಕ ಕಲಾವಿದನನ್ನು ತಮ್ಮ ಭವಿಷ್ಯವೇನು ಎಂಬ ಚಿಂತೆ ಕಾಡುತ್ತಾ ಇದ್ದಂತೆ ಕಂಡಿತು. ಅನೇಕರು ಈ ಸಂಘಟನೆಗೆ ಮುಂದೊಂದು ದಿನ ಸಾಂಸ್ಥಿಕ ಸ್ವರೂಪ ಸಿಕ್ಕಿತೇನೋ ಎಂದು ಸೇರಿದವರಿದ್ದರು. ಅವರಲ್ಲಿ ಅನೇಕರು ವೃತ್ತಿ ವೈದ್ಯರೂ, ಇಂಜಿನೀಯರುಗಳೂ ಕೆಲಸ ಬಿಟ್ಟು ಬಂದವರಿದ್ದರು. ಸರ್ಕಾರಿ ಅನುದಾನವಿಲ್ಲದೆ ಬದುಕುವ ಸಾಧ್ಯತೆಗಳೇ ಇಲ್ಲದ ಒಂದು ದಾರಿ ಅವರು ಹಿಡಿದಂತೆ ಕಂಡಿತು. ಶ್ರೀ ಬಿ.ವಿ. ಕಾರಂತರು ಆಗ ರಾಜೀನಾಮೆ ಕೊಟ್ಟಿದ್ದರಿಂದ ಅವರು ನನಗೆ ಸಿಕ್ಕಲಿಲ್ಲ. ಆದರೆ ಅಲ್ಲಿದ್ದ ಕಲಾವಿದರಲ್ಲಿ ಕೆಲವರು, ಕಾರಂತರು ಇದು ಶಾಶ್ವತ ಸಂಸ್ಥೆಯಾಗುತ್ತೆಂದು ತಪ್ಪು ಮಾಹಿತಿ ಕೊಟ್ಟರೆಂದು ಕಾರಂತರನ್ನು ದೂರಿದರು. ಅವರು ಹಾಗೆ ಹೇಳಿದರೋ ಇಲ್ಲವೋ ಅಥವಾ ಅವರಿಗೂ ಈ ಕುರಿತು ತಪ್ಪು ಮಾಹಿತಿ ಕೊಟ್ಟಿದ್ದರೋ ಯಾರಿಗೆ ಗೊತ್ತು. ನನ್ನ ಮಟ್ಟಿಗಂತೂ ಆತ್ಮಗೌರವವನ್ನು ಬಿಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ. ರಾಜಕಾರಣಿಗಳಿಗೆ, ಮಂತ್ರಿಗಳಿಗೆ ಬೆಣ್ಣೆ ತಿಕ್ಕಿ ಬದುಕಬೇಕೆಂದಾದರೆ ನಾಟಕ ಕಲೆಯನ್ನು ತೆಗೆದು ಕಸದ ಬುಟ್ಟಿಗೆ ಎಸೆಯುವುದು ಒಳ್ಳೆಯದೆನಿಸಿತು. ಅವರಿಗೆ ಬದಲಾಗುತ್ತಿರುವ ನಾಗರೀಕತೆಯಲ್ಲಿ ವಿಡಿಯೋ, ಕಾಮಿಕ್ಸ್ ಮೊದಲಾದ ಕಲಾಭಿವ್ಯಕ್ತಿಯ ಹೊಸಹೊಸ ಪ್ರಕಾರಗಳು ಪ್ರವರ್ಧಮಾನಕ್ಕೆ ಬರುತ್ತಿರುವುದರ ಬಗ್ಗೆ ಹೇಳಿ, ಮಾರುಕಟ್ಟೆ ಇರುವ ಯಾವುದಾದರೂ ಹೊಸ ಹೊಸ ದಾರಿಗಳಲ್ಲಿ ಪ್ರಯೋಗ ನಡೆಸಿ ಅನುದಾನದಿಂದ ಮುಕ್ತರಾಗಿ ಎಂದು ಹೇಳಿದೆ. ಅವರಲ್ಲಿ ಬಹಳ ಜನಕ್ಕೆ ಬೇಜಾರಾಯ್ತು. ನಾಟಕ ಕಲೆಯಲ್ಲಿ ವಿಡಿಯೋ ಕಲೆಯಲ್ಲಿ ಆತ್ಮಸಾಕ್ಷಾರದ ಮಾರ್ಗವೆನ್ನುವಷ್ಟು ಗಂಭೀರವಾಗಿ ನಾಟಕ ಕಲೆಯನ್ನು ಪರಿಗಣಿಸಿದ್ದ ಅವರಿಗೆ ನನ್ನ ಮಾತು ಪಥ್ಯವಾಗಲಿಲ್ಲ. ಆಧುನಿಕ ರಂಗಭೂಮಿ ಬೇರೆಡೆಗಳಲ್ಲೆಲ್ಲಾ ಹೇಗೆ ಪ್ರವರ್ಧಮಾನಕ್ಕೆ ಬರುತ್ತಿದೆಯೆಂದು ಭಾವೋದ್ವಿಗ್ನರಾಗಿ ನನಗೆ ವಿವರಿಸಿದರು. ಆದರೆ ಅವರ ಕನಸಿಗೂ ಅವರು ಎದುರಿಸಬೇಕಾದ ಪರಿಸ್ಥಿತಿಗೂ ತುಂಬಾ ವ್ಯತ್ಯಾಸವಿತ್ತು.
ಯಾವುದೇ ಸಂಸ್ಥೆಯಾಗಲಿ, ಕಲೆಯಾಗಲಿ ಅದು ಅನುದಾನದಿಂದಲೇ ಹುಟ್ಟಿದರೂ ಅದು ನಿಜವಾಗಿಯೂ ಆವತ್ತಿನ ಸಂಸ್ಕೃತಿಗೆ ಅರ್ಥಪೂರ್ಣವಾದದ್ದಾದರೆ ಅದು ಬೆಳೆಯುತ್ತಾ ಬಂದಂತೆ, ಅದಕ್ಕೆ ಅನುದಾನ ಅಗತ್ಯ ತಂತಾನೆ ಕಡಿಮೆಯಾಗುತ್ತಾ ಹೋಗಬೇಕು. ಅದು ಬಿಟ್ಟು ಹೆಚ್ಚುತ್ತಾ ಹೋದರೆ ಅದರ ಅರ್ಥ ಇಷ್ಟೇ. ಅದರ ಅಮೂಲ್ಯತೆಯನ್ನು ಕುರಿತು ಬೊಗಳೆ ಹೊಡೆಯುವರೆಲ್ಲಾ ಭ್ರಾಂತರು, ಇಲ್ಲವೇ ಪಕ್ಕಾ ಕಳ್ಳರು.
ಸಂಗ್ರಹ: "ಪುಸ್ತಕ" ಸ್ಮರಣ ಸಂಚಿಕೆ, ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ), ಬೆಂಗಳೂರು
|















